ಮೈಸೂರು: ಗಳಿಸಿರುವ ಅಂಕಕ್ಕಿಂತ ಹೆಚ್ಚಿನ ಅಂಕ ತೋರಿಸಿ ಆಯ್ಕೆಯಾದ ನಾಲ್ವರು ಶಿಕ್ಷಕರ ವಿರುದ್ಧ ದೂರು ದಾಖಲಾಗಿದೆ.
ಪದವಿಯಲ್ಲಿ ಗಳಿಸಿದ್ದಕ್ಕಿಂತಲೂ ಹೆಚ್ಚಿನ ಅಂಕವನ್ನು ತೋರಿಸಿ ಆಯ್ಕೆಯಾದ ಹಾಸನ ಜಿಲ್ಲೆಯ ನಾಲ್ವರು ಶಿಕ್ಷಕರ ವಿರುದ್ಧ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮೈಸೂರು ವಿಭಾಗದ ಕಾರ್ಯದರ್ಶಿ ಭಾರತಿ ಅವರು ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹಾಸನದ ಕಬ್ಬತ್ತಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಬಿ.ಎನ್.ಶಿವಪ್ಪಆಚಾರಿ(56), ಗವೇನಹಳ್ಳಿಯ ಶಿಕ್ಷಕ ಯೋಗಣ್ಣ(58), ಆರ್‌ಸಿ ರಸ್ತೆ ಶಿಕ್ಷಕಿ ಮೋಹಿನಿ ಆಚಾರಿ(56), ಪ್ರೌಢಶಾಲೆಯ ಕಾವೇರಿ ಆಚಾರಿ(55) ಆರೋಪ ಹೊತ್ತಿರುವ ಶಿಕ್ಷಕರು.
1993-94ನೇ ಸಾಲಿನಲ್ಲಿ ಮೈಸೂರು ವಿಭಾಗ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇದ್ದ ಸಹ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಈ ಶಿಕ್ಷಕರು ತಪ್ಪು ಮಾಹಿತಿ ನೀಡಿದ್ದರು.
ಈ ಸಂಬಂಧ ದೂರು ನೀಡುವಂತೆ ಶಾಲಾಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಆಯುಕ್ತರು ಸೂಚಿಸಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.