ಕೇಂದ್ರ ಸಚಿವ ಸದಾನಂದಗೌಡರನ್ನು ಭೇಟಿ ಮಾಡಿದ ಸಚಿವ ಬಿ.ಸಿ.ಪಾಟೀಲ್

ಬೆಂಗಳೂರು: ದೆಹಲಿಗೆ ಭೇಟಿ ನೀಡಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿಗಳೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಕೇಂದ್ರ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡರನ್ನು ಭೇಟಿಯಾದರು.
ಈ ಬಾರಿ ಉತ್ತಮ ಮಳೆಯಾಗಿದ್ದು, ಕೋವಿಡ್‍ನಿಂದ ಗ್ರಾಮೀಣ ಭಾಗದಲ್ಲಿ ಕೃಷಿಯೆಡೆಗೆ ರೈತಾಪಿವರ್ಗದ ಜೊತೆಗೆ ಯುವಜನತೆ ಕೃಷಿಗೆ ಹೆಚ್ಚು ಒತ್ತು ನೀಡಿರುವುದರಿಂದ ಈ ಬಾರಿ ಬಿತ್ತನೆಯೂ ಹೆಚ್ಚಾಗಿದೆ. ಆದ್ದರಿಂದ ಕೃಷಿಗೆ ಅಗತ್ಯವಾದ ರಸಗೊಬ್ಬರ ಹೆಚ್ಚಿನದಾಗಿ ಬಳಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ರೈತರಿಗೆ ಯಾವುದೇ ಕಾರಣಕ್ಕೂ ರಸಗೊಬ್ಬರದ ಕೊರತೆಯಾಗಲೀ ಯೂರಿಯಾದ ಕೊರತೆಯಾಗಲೀ ಆಗದಂತೆ ಕೃಷಿ ಸಚಿವರು ದಿಟ್ಟ ಹೆಜ್ಜೆಯಿಟ್ಟಿರುವ ಬಗ್ಗೆ ಕೇಂದ್ರದದ ಸಚಿವರೊಂದಿಗೆ ಚರ್ಚಿಸಿದರು.
ನಕಲಿ ಬೀಜ ತಡೆ, ನಕಲಿ ರಾಸಾಯನಿಕ ಗೊಬ್ಬರ ಜಾಲವನ್ನು ಬೇಧಿಸುವಲ್ಲಿ ಕೃಷಿ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದರು.
ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ನಕಲಿ ಬೀಜ, ರಾಸಾಯನಿಕ ಗೊಬ್ಬರ ಹಾಗೂ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಅವರ ಪರವಾನಿಗೆ ರದ್ದುಗೊಳಿಸುವ ಬಗ್ಗೆಯೂ ಕೃಷಿ ಸಚಿವ ಬಿ.ಸಿ.ಪಾಟೀಲ್ ಕೇಂದ್ರ ಸಚಿವರ ಜೊತೆ ಮಾಹಿತಿ ಹಂಚಿಕೊಂಡರು.
ಕೃಷಿ ಸಚಿವರ ಈ ದಿಟ್ಟ ಕ್ರಮ ಹಾಗೂ ರೈತರ ಬಗೆಗಿನ ಕಾಳಜಿಗೆ ಸದಾನಂದಗೌಡರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಜ್ಯದ ಅವಶ್ಯಕತೆಗಿಂತಲೂ ಹೆಚ್ಚಿನ ರಸಗೊಬ್ಬರವನ್ನು ಪೂರೈಸಿದ್ದು, ಮುಂದಿನ ದಿನಗಳಲ್ಲೂ ಸಹ ರಸಗೊಬ್ಬರದ ಕೊರತೆಯಾಗುವುದಿಲ್ಲವೆಂದು ಡಿ.ವಿ.ಸದಾನಂದಗೌಡ ಬಿ.ಸಿ.ಪಾಟೀಲರಿಗೆ ಭರವಸೆ ನೀಡಿದರು. ಇದರೊಂದಿಗೆ ಕರ್ನಾಟಕಕ್ಕೆ ಅವಶ್ಯಕ ಗೊಬ್ಬರವನ್ನು ಪೂರೈಸಲು ಅಧಿಕಾರಿಗಳಿಗೆ ಸೂಚಿಸಿದರು.