ಗಾಂಜಾ ಗಿಡ ಬೆಳಸುತ್ತಿದ್ದ ವ್ಯಕ್ತಿ ಬಂಧನ

ಮೈಸೂರು,ಡಿ. 26- ನಗರದ ಉದಯಗಿರಿ ಪೊಲೀಸರು ಗಾಂಜಾ ಗಿಡಗಳನ್ನು ಬೆಳಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಡಿ. 23ರಂದು ನಗರದ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಲಾಲ್
ಘಾಟ್‍ನಲ್ಲಿರುವ ಸರ್ವೆ ನಂ 48ರ ಖಾಲಿ ನಿವೇಶನದಲ್ಲಿ ಅಕ್ರಮವಾಗಿ ಮಾದಕ ವಸ್ತು ಗಾಂಜಾ ಗಿಡಗಳನ್ನು ಬೆಳಸುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಖಾಲಿ ನಿವೇಶನದಲ್ಲಿ ಬೆಳೆಸಿದ್ದ ರೂ. 3 ಲಕ್ಷ ರೂ. ಮೌಲ್ಯದ 14 ಕೆ.ಜಿ 800 ಗ್ರಾಂ ತೂಕದ 4 ಹಸಿ ಗಾಂಜಾ ಗಿಡಗಳು ಹಾಗೂ 2 ಒಣಗಿದ ಗಾಂಜಾ ಗಿಡಗಳನ್ನು ಕಿತ್ತು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಡಿ.ಸಿ.ಪಿ ಎಂ. ಮುತ್ತುರಾಜುರವರ ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಎ.ಸಿ.ಪಿ ಎಂ.ಎನ್. ಶಶಿಧರ್ ರವರ ನೇತೃತ್ವದಲ್ಲಿ ಉದಯಗಿರಿ ಠಾಣೆ ಪೊಲೀಸ್ ಇನ್ಸ್‍ಪೆಕ್ಟರ್ ಪಿ.ಕೆ. ರಾಜು, ಪಿ.ಎಸ್.ಐಗಳಾದ ಸುನೀಲ್, ನಾಗರಾಜ ನಾಯಕ್ ಹಾಗೂ ಸಿಬ್ಬಂದಿಗಳಾದ ಸಿದ್ದಿಕ್ ಅಹಮದ್, ಆನಂದ್, ಶಾಜಿಯಾ, ಗೋಪಾಲ್, ಶಿವರಾಜಪ್ಪ, ಸಮೀರ್, ಸಂತೋಷ್, ವಿನೋದ್ ರಾಥೋಡ್, ಮಲ್ಲಿಕಾರ್ಜುನ ಚೌಗುಲೆ ರವರುಗಳು ಈ ದಾಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.