ಮಾದಕ ದ್ರವ್ಯ ಮಾರಾಟ: ವಕೀಲ, ಕಾಲೇಜು ವಿದ್ಯಾರ್ಥಿ ಬಂಧನ

ಮೈಸೂರು, ಡಿ. 26- ರಸ್ತೆಯಲ್ಲಿ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ಸ್ ಪೆಡ್ಲರ್‍ಗಳನ್ನು ಮೈಸೂರು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಿಸಿಬಿ ಪೊಲೀಸರಿಗೆ ದೊರೆತ ಮಾಹಿತಿ ಮೇರೆಗೆ ಡಿ. 23ರಂದು ನಗರದ ಕುವೆಂಪುನಗರ ಕೆ.ಬ್ಲಾಕ್ ಆದಿಚುಂಚನಗಿರಿ ರಸ್ತೆಯಲ್ಲಿ ಬುಲೆಟ್ ಬೈಕ್‍ನ್ನು ನಿಲ್ಲಿಸಿಕೊಂಡು ಅಲ್ಲಿಗೆ ಗಿರಾಕಿಗಳನ್ನು ಬರಮಾಡಿಕೊಂಡು ಅವರುಗಳಿಗೆ MDMA, ECSTASY TABLETS ಮತ್ತು LSD ಡ್ರಗ್ಸ್ ಅನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರ ಬಳಿ ಇದ್ದ 31 ಗ್ರಾಂ ತೂಕದ MDMA, ECSTASY TABLETS ಮತ್ತು LSD ಪೇಪರ್, ರೂ. 5 ಸಾವಿರ ಹಣ, ಎರಡುಮೊಬೈಲ್ ಫೋನ್‍ಗಳು ಹಾಗೂ ಒಂದು ಬೈಕ್ ನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಇಬ್ಬರು ಆರೋಪಿಗಳ ಪೈಕಿ 1ನೇ ಆರೋಪಿ ಮೈಸೂರಿನ ಜೆ.ಎಸ್.ಎಸ್. ಕಾನೂನು ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದು, 2ನೇ ಆರೋಪಿ ವಕೀಲ ವೃತ್ತಿ ಮಾಡುತ್ತಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.

ಆರೋಪಿತರು ಸದರಿ ಮಾದಕ ವಸ್ತುವನ್ನು ಎಲ್ಲಿಂದ ತೆಗೆದುಕೊಂಡು ಬರುತ್ತಿದ್ದರು ಹಾಗೂ ಮೈಸೂರಿನಲ್ಲಿ ಯಾರು ಯಾರಿಗೆ ಮಾರಾಟ ಮಾಡುತ್ತಿದ್ದರು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ಈ ಸಂಬಂಧ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು ನಗರದ ಡಿಸಿಪಿ ಎಂ.ಎಸ್. ಗೀತ, ಸಿ.ಸಿ.ಬಿ ಘಟಕದ ಎ.ಸಿ.ಪಿ ಸಿ.ಕೆ. ಅಶ್ವತ್ಥನಾರಾಯಣ ರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಪೊಲೀಸ್ ಇನ್ಸ್‍ಪೆಕ್ಟರ್ ಎ. ಮಲ್ಲೇಶ್, ಪಿ.ಎಸ್.ಐ ಪ್ರತಿಭಾ ಜಂಗವಾಡ, ಸಿಬ್ಬಂದಿಗಳಾದ ಎಂ. ಅನಿಲ್, ಸುಭಾನಲ್ಲಾ ಬಾಲದಾರ, ಗಣೇಶ್, ಶ್ರೀನಿವಾಸ್ ಪ್ರಸಾದ್, ಜೋಸೆಫ್ ನರೋನಾ, ರಾಧೇಶ್, ಶ್ರೀನಿವಾಸ್, ಅರುಣ್ ಕುಮಾರ್, ಮಮತ ಈ ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗಿ ಆಗಿದ್ದರು.