ಗಣಿಗಾರಿಕೆ ದುರಂತ: ಸಾವಿಗೆ ಹೊಣೆ ಯಾರು?

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ


ಚಾಮರಾಜನಗರ: ಗಡಿಜಿಲ್ಲೆಯ ಚಾಮರಾಜನಗರದಲ್ಲಿ ಅಕ್ರಮವಾಗಿ ಅಪಾಯಕಾರಿ ಮಟ್ಟದಲ್ಲಿ, ಅವೈಜ್ಞಾನಿಕವಾಗಿ ಗಣಿಗಾರಿಕೆ ನಡೆಸಿದರ ಪರಿಣಾಮ ಸಾವು-ನೋವುಗಳು ಹೆಚ್ಚಾದರೂ ಇಲಾಖಾಧಿಕಾರಿಗಳು ಕ್ರಮವಹಿಸದೆ ಮೌನಕ್ಕೆ ಶರಣಾಗಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೋಕಿನ ಮಡಹಳ್ಳಿ ಗ್ರಾಮದಲ್ಲಿ ಗುಡ್ಡ ಕುಸಿದಾಗ ಡಿಸಿ ಚಾರುಲತಾ ಸೋಮಾಲ್ ದಕ್ಷತೆಯಿಂದ ಕೆಲಸ ನಿರ್ವಹಣೆ ಮಾಡಿ ಅಫಿಡೆವಿಟ್ ನೊಡನೆ ಸೂಕ್ತ ದಾಖಲೆ ಸಲ್ಲಿಸುವುದು, ಕೆಲಸದ ವೇಳೆ ರಕ್ಷಣಾ ಉಪಕರಣಗಳ ಬಳಕೆ ಸೇರಿದಂತೆ ಹಲವು ಕಟ್ಟಿನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದರು.

ಅವೈಜ್ಞಾನಿಕ ಗಣಿಗಾರಿಕೆ ಪರಿಣಾಮವೇ ಈ ಅವಘಡಕ್ಕೆ ಕಾರಣವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ನಂಜುಂಡಸ್ವಾಮಿ ತಿಳಿಸಿದ್ದಾರೆ.

ಆದರೆ ಅಧಿಕಾರಿಗಳು ಮಾತ್ರ ದುರಂತ ಸಂಭವಿಸಿದಾಗ ಹೊರಗೆ ಬಂದು ಪರಿಶೀಲನೆ ನೆಪಮಾತ್ರಕ್ಕೆ ಮಾಡಿ ಮುಗಿಸಿಬಿಡುತ್ತಾರೆ. ಮತ್ತದೆ ಕಾರ್ಯಗಳು ನಂತದರ ದಿನಗಳಲ್ಲಿ ಮುಂದುವರೆಯಲಿದೆ. ಅದರ ಪರಿಣಾಮವೆ ಜಿಲ್ಲೆಯಲ್ಲಿ ಮತ್ತೊಂದು ಅವಘಡ ಸಂಭವಿಸಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು.

ಗಣಿ ಇಲಾಖೆಯ ಪ್ರಕಾರ ಕ್ವಾರಿ ನಡೆಸಬೇಕಾದರೆ ಹಂತ-ಹಂತವಾಗಿ ಸ್ಫೋಟ ಮಾಡಬೇಕು, ಜೊತೆಗೆ ಸ್ಫೋಟಕಗಳನ್ನು ಬಳಸಿದ್ದೇ ಆದಲ್ಲಿ ಇಲಾಖೆ ಅನುಮತಿ ಪಡೆದು ನುರಿತ ತಜ್ಞರಿಂದ ಸ್ಫೋಟಿಸಬೇಕೆನ್ನುವುದಾಗಿದೆ. ಆದರೆ, ಹಣ ಹೂಡಿಕೆ ಮಾಡಿ ಕಡಿಮೆ ಅವಧಿಯಲ್ಲೇ ಲಾಭ ಕಾಣಬೇಕೆಂಬ ಅತಿ ಆಸೆಯಿಂದ ಒಂದೇ ಕಡೆಯಲ್ಲಿ ಆಳವಾಗಿ ಗಣಿಗಾರಿಕೆ ಮಾಡಿ ನಿರ್ಲಕ್ಷ್ಯ ಮೆರೆದ ಕಾರಣ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಘಟನಾ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ನಂಜುಂಡಸ್ವಾಮಿ ಭೇಟಿ ಪರಿಶೀಲನೆ ನಡೆಸಿ”ಅವೈಜ್ಞಾನಿಕ, ಅಸುರಕ್ಷಿತೆಯ ಗಣಿಗಾರಿಕೆಯಿಂದ ಜೀವಹಾನಿಯಾಗಿದ್ದು, ಇದರ ಸಂಪೂರ್ಣ ಜವಾಬ್ದಾರರು ಗುತ್ತಿಗೆದಾರರೇ ಆಗಿದ್ದಾರೆ. ಸಾಕಷ್ಟು ಬಾರಿ ನೋಟಿಸ್ ಕೊಟ್ಟು, ಸುರಕ್ಷಿತ ಗಣಿಗಾರಿಕೆ ನಡೆಸುವುದಾಗಿ ಛಾಪ ಕಾಗದದಲ್ಲಿ ಬರೆಸಿಕೊಂಡಿದ್ದರೂ ಅವೈಜ್ಞಾನಿಕ ಕಾರ್ಯ ಎಸಗಿದ್ದಾರೆಂದು ಅಸಹಾಯಕತೆ ಪ್ರದರ್ಶಿಸಿದ್ದಾರೆ.ಇನ್ನು ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಆದರೆ, ಸಾಕಷ್ಟು ಬಾರಿ ನೋಟಿಸ್, ಸಭೆಗಳನ್ನು ನಡೆಸಿದರೂ ಯಾವುದಕ್ಕೂ ಗಣಿ ಮಾಲೀಕರು ಕ್ಯಾರೆ ಎನ್ನುತ್ತಿಲ್ಲವೇ ಎಂಬ ಪ್ರಶ್ನೆ ಮೂಡಿದೆ.

ಒಟ್ಟಿನಲ್ಲಿ ಒಂದೆಡೆ ಗಣಿ ಲೂಟಿ ಮತ್ತೊಂದೆಡೆ ಮಾತು ಕೇಳದ ಗಣಿ ಮಾಲೀಕರು, ನಿರ್ಲಕ್ಷ ವಹಿಸಿರುವ ಅಧಿಕಾರಿಗಳ ನಡುವೆ ಸಾಮಾನ್ಯರು ತತ್ತರಿಸುತ್ತಿದ್ದಾರೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.