ಬೆಳಗಾವಿ: ಅಯೋಧ್ಯೆ ಮಾದರಿಯಲ್ಲಿ ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ರಾಮನಗರ ನಾಮಕರಣ ಆಗಿರುವುದೇ ರಾಮನ ಹೆಸರಿನಲ್ಲಿ ಎಂದು ತಿಳಿಸಿದರು.
ಅಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬೊಮ್ಮಾಯಿಯವರು ಭರವಸೆ ನೀಡಿದ್ದಾರೆ, ರಾಮನಗರದಲ್ಲಿ ಶ್ರೀರಾಮಮಂದಿರ ನಿರ್ಮಾಣ ಮಾಡುವುದು ನಿಶ್ಚಿತ ಎಂದು ತಿಳಿಸಿದರು.
ಉತ್ತರ ಭಾರತದಂತೆ ದಕ್ಷಿಣ ಭಾರತದಲ್ಲೂ ರಾಮ ಮಂದಿರ ನಿರ್ಮಾಣ ಆಗಲಿದೆ ಎಂಬ ವಿಶ್ವಾಸ ಇದೆ.
ಬರುವ ಬಜೆಟ್ ನಲ್ಲಿ ಸಿಎಂ ಬಜೆಟ್ ಘೋಷಣೆ ಮಾಡುವ ಸಾಧ್ಯತೆ ಇದೆ. ಈಗಲೇ ನಿರ್ಮಾಣ ಸಾಧ್ಯವಿಲ್ಲ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ರಾಮನಗರದ ರಾಮದೇವರ ಬೆಟ್ಟವನ್ನು ದಕ್ಷಿಣ ಅಯೋಧ್ಯೆ ಕೇಂದ್ರವನ್ನಾಗಿ ಮಾಡುತ್ತೇವೆ.
ದೇವಸ್ಥಾನ ಅಭಿವೃದ್ಧಿಗೆ ಯೋಜನೆ ರೂಪಿಸಲು ಮುಖ್ಯಮಂತ್ರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ ಎಂದು ಅಶ್ವಥ್ ನಾರಾಯಣ್ ತಿಳಿಸಿದರು.