ಮಂಡ್ಯ: ಕೃಷಿ ಮಂತ್ರಾಲಯದಿಂದ ಸಹಕಾರ ಮಂತ್ರಾಲಯವನ್ನು ಪ್ರತ್ಯೇಕಿಸಿ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಪ್ರಧಾನ ಮಂತ್ರಿಗಳು ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ಭಾರತ ಸರ್ಕಾರದ ಸಹಕಾರ ಹಾಗೂ ಗೃಹ ಇಲಾಖೆ ಸಚಿವರಾದ ಅಮಿತ್ ಶಾ ಅವರು ತಿಳಿಸಿದರು.
ಅವರು ಮಂಡ್ಯ ಜಿಲ್ಲೆಯ ಗೆಜ್ಜಲಗೆರೆಯಲ್ಲಿ 260.90 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಮೆಗಾ ಡೇರಿ ಉದ್ಘಾಟಿಸಿ ಮಾತನಾಡಿದರು.
ಮೆಗಾ ಡೇರಿಯಲ್ಲಿ 73 ಕೋಟಿ ಕಟ್ಟಡ ನಿರ್ಮಾಣ,183 ಕೋಟಿ ಯಂತ್ರೋಪಕರಣಗಳಿಗೆ ವೆಚ್ಚ ಮಾಡಲಾಗಿದೆ. ಇಲ್ಲಿ 10 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ವ್ಯವಸ್ಥೆ ಇದೆ. ಮುಂದಿನ ದಿನಗಳಲ್ಲಿ 14 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ರೀತಿ ಉನ್ನತೀಕರಿಸಲಾಗುವುದು. ಹಾಲನ್ನು ಸಂಸ್ಕರಿಸುವುದರಿಂದ ಬಹಳಷ್ಟು ರೈತರು ಆರ್ಥಿಕವಾಗಿ ಸದೃಢರಾಗಿದ್ದಾರೆ ಎಂದರು.
ಕರ್ನಾಟಕ ರಾಜ್ಯದಲ್ಲಿ ಹಾಲು ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.15210 ಗ್ರಾಮ ಮಟ್ಟದ ಹಾಲು ಸಹಕಾರ ಸಂಘಗಳಿವೆ 22 ಲಕ್ಷದ 22 ಸಾವಿರ ರೈತರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಮಿಲ್ಕ್ ಫೆಡರೇಷನ್ ನ ಟನ್೯ ಓವರ್ 4 ಕೋಟಿ ಇದ್ದದ್ದು, ಇಂದು 25 ಸಾವಿರ ಕೋಟಿ ತಲುಪಿದೆ ಎಂದರು.
ಹಾಲು ಉತ್ಪಾದಕರ ಸಂಘದ ಗಳಿಕೆಯ ಶೇ 80% ರಷ್ಟು ರೈತರಿಗೆ ನೀಡಲಾಗುತ್ತಿದೆ. ಗುಜರಾತ್ ಕ್ಷೀರ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿದೆ. ಅಮೂಲ್ ಹಾಗೂ ನಂದಿನಿ ಎರೆಡೂ ಒಗ್ಗೂಡಿ ಕೆಲಸ ಮಾಡಿದರೆ ಕೆಲವೇ ವರ್ಷಗಳ ಪ್ರತಿ ಹಳ್ಳಿಯಲ್ಲಿ ಪ್ರಾಥಮಿಕ ಡೈರಿ ಸ್ಥಾಪನೆ ಸಾಧ್ಯ ಎಂದರು.
ಎಥನಾಲ್ ಘಟಕ ಸ್ಥಾಪನೆ
ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಮೈ ಶುಗರ್ ನಲ್ಲಿ ಬರುವ ವರ್ಷ ಎಥನಾಲ್ ಘಟಕ ಸ್ಥಾಪನೆ ಮಾಡಿ ರೈತರಿಗೆ ವರದಾನವಾಗುವ ರೀತಿಯಲ್ಲಿ ಪರಿವರ್ತಿಸಲಾಗುವುದೆಂದು ತಿಳಿಸಿದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರದ್ದು ಬೆಂಗಳೂರಿನ ಪ್ರಥಮ ಮೆಗಾ ಡೇರಿ ಸ್ಥಾಪನೆಯಲ್ಲಿ ಮಹತ್ವದ ಪಾತ್ರವಿದೆ. ಸ್ವತಂತ್ರವಾಗಿ ಹಾಲು ಉತ್ಪಾದಿಸಿ, ಸಂಸ್ಕರಿಸಿ, ಪ್ಯಾಕ್ ಮಾಡಿ, ವಿವಿಧ ಪದಾರ್ಥಗಳನ್ನು ತಯಾರಿಸಿ ಸ್ವಾವಲಂಬನೆಯ ವ್ಯವಸ್ಥೆ ಮೆಗಾ ಡೇರಿಯಲ್ಲಿ ಆಗುತ್ತಿದೆ. ನಮ್ಮ ಪ್ರಧಾನಮಂತ್ರಿಗಳ ಆತ್ಮ ನಿರ್ಭರ್ ಭಾರತ್ ಕನಸಿಗೆ ಕರ್ನಾಟಕದ ಹಾಲು ಒಕ್ಕೂಟಗಳು ದೊಡ್ಡ ಕೊಡುಗೆಯನ್ನು ಕೊಡುತ್ತಿವೆ ಎಂದರು.
ವಿಶ್ವೇಶ್ವರ ನಾಲೆಯ ನೀರಾವರಿಯ ಕೊನೆ ಭಾಗದಲ್ಲಿರುವ ರೈತರಿಗೆ ಯೋಜನೆಗಳನ್ನು ರೂಪಿಸುತ್ತಿದ್ದು, ಒಂದು ವಾರದಲ್ಲಿ ಅವೆಲ್ಲಕ್ಕೂ ಅನುಮೋದನೆ ನೀಡಲಾಗುವುದು ಎಂದರು.
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರೂ ಸಹ ಸಂದೇಶ ನೀಡಿ ಸಹಕಾರಿ ಬ್ಯಾಂಕುಗಳಲ್ಲಿ ನಡೆಯುತ್ತಿರುವ ಅನ್ಯಾಯ ತಡೆಗೆ ಅಮಿತ್ ಶಾ ಅವರೇ ಸಹಕಾರ ಸಚಿವರಾಗಿ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಅಮಿತ್ ಶಾ ಅವರದ್ದು ದೊಡ್ಡ ವ್ಯಕ್ತಿತ್ವ ಎಂದು ಬಣ್ಣಿಸಿದ್ದಾರೆ.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿ ಮೆಗಾ ಡೈರಿ ಸ್ಥಾಪನೆ ಪುಣ್ಯದ ಕೆಲಸ ಇದರಿಂದ ರೈತ ಕುಟುಂಬಕ್ಕೆ ಶಕ್ತಿ ತುಂಬಬಹುದು. ಉಕ್ಕಿನ ಮನುಷ್ಯ
ಸರ್ಧಾರ್ ವಲ್ಲಭಭಾಯಿ ಪಟೇಲ್ ರಂತೆ ಅಮಿತ್ ಶಾ ಅವರು ಧೃಡ ನಿರ್ಧಾರ ಕೈಗೊಳ್ಳುವ ಗುಣದಿಂದಲೇ ಖ್ಯಾತ ರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಡ್ಯವನ್ನು ಆರ್ಥ ಮಾಡಿಕೊಂಡರೆ ಇಂಡಿಯಾವನ್ನು ಅರ್ಥ ಮಾಡಿಕೊಂಡಂತೆ . ಮಂಡ್ಯದಲ್ಲಿ ಅತೀ ಹೆಚ್ಚಿನ ಪ್ರಮಾಣದ ಹಾಲು ಉತ್ಪಾದನೆ ಮಾಡಲಾಗುತ್ತಿದೆ. ಮೆಗಾ ಡೇರಿಯ ಸ್ಥಾಪನೆಯಿಂದ ಹಾಲು ಉತ್ಪಾದಕರಿಗೆ ಅನುಕೂಲವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಬಕಾರಿ ಹಾಗೂ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ರೇಷ್ಮೆ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಕೆ.ಸಿ ನಾರಯಣಗೌಡ, ಸಹಕಾರ ಸಚಿವ ಎಸ್.ಟಿ ಸೋಮಶೇಖರ್, ಮನ್ ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರ, ರಾಜ್ಯಧ್ಯಕ್ಷ ಪ್ರಹ್ಲಾದ್ ಜೋಶಿ, ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಾಂತ ಎಲ್ ಹುಲ್ಮನಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.