ವಿಜೃಂಭಣೆಯಿಂದ ಜರುಗಿದ ಬಂಡಿಜಾತ್ರೆ

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ: ತಾಲ್ಲೋಕಿನ ಸಂತೆಮರಳ್ಳಿ ಹೋಬಳಿಗೆ ಸೇರಿದ ಕಸ್ತೂರಿನ ದೊಡ್ಡಮ್ಮ ತಾಯಿ ದೇವಸ್ಥಾನದಲ್ಲಿ ಹೊಸ ವರ್ಷದ ಮೊದಲ ದಿನವಾದ (. 1) ಇಂದು ಬಂಡಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಬಹಳ ವಿಜೃಂಭಣೆಯಿಂದ ನಡೆಯಿತು.

ಎರಡು ಮೂರು ವರ್ಷಗಳ ಹಿಂದೆ ಕೊವಿಡ್ ಅಲೆಯಬ್ಬರಕ್ಕೆ ಜಾತ್ರೆ ನಿಷೇದವಾಗಿದ್ದರಿಂದ ಅರ್ಚಕರಿಗಷ್ಟೆ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿತು. ಈ ಸಲ ಯಾವುದೇ ಅಡಚಣೆ ಇಲ್ಲದ ಪರಿಣಾಮ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲು ಜಾತ್ರೆಗೆ ಬಂಡಿ ಕಟ್ಟುವ 16 ಗ್ರಾಮಸ್ಥರು ಸೇರಿದಂತೆ ಹಬ್ಬ ಆಚರಿಸುವ 23 ಗ್ರಾಮಗಳ ಗ್ರಾಮಸ್ಥರು ನಿರ್ಧರಿಸಿ ಅದ್ದೂರಿಯಾಗಿ ಹಬ್ಬ ಆಚರಿಸಿದರು.

ಪ್ರತಿ ವರ್ಷದ ಧನುರ್ಮಾಸದಲ್ಲಿ ಪುಷ್ಯ ಮಾಸದ ಎರಡನೇ ಭಾನುವಾರ ಬಂಡಿ ಜಾತ್ರೆ ನಡೆಯುತ್ತದೆ. ಈ ಬಾರಿ ವರ್ಷದ ಮೊದಲ ದಿನವೇ ಜಾತ್ರೆ ಬಂದಿದೆ.

ಬಹು ಊರ ಹಬ್ಬ

ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಜಾತ್ರೆಗಳು ಆಯಾ ಗ್ರಾಮ ಇಲ್ಲವೇ ಸುತ್ತಮುತ್ತಲಿನ ಬೆರಳೆಣಿಕೆಯಷ್ಟು ಊರುಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಆದರೆ ಕಸ್ತೂರು ಬಂಡಿ ಜಾತ್ರೆ ವಿಶೇಷವೇ ಬೇರೆ.ಇದು ಹಲವು ಗ್ರಾಮಗಳಿಗೆ ಸೇರಿದ ಜಾತ್ರೆ. ನೆರೆಯ ಮೈಸೂರಿನ ನಂಜನಗೂಡು ತಾಲ್ಲೂಕಿನ ಕೆಲವು ಹಳ್ಳಿಗಳೂ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತವೆ.

ಕಸ್ತೂರು, ಭೋಗಾಪುರ, ಮರಿಯಾಲ, ಕಿರಗಸೂರು, ಸಪ್ಪಯ್ಯನಪುರ, ಕೆಲ್ಲಂಬಳ್ಳಿ, ಮೂಕಹಳ್ಳಿ, ಆನಹಳ್ಳಿ, ತೊರವಳ್ಳಿ, ಪುಟ್ಟೇಗೌಡನ ಹುಂಡಿ, ಹೊನ್ನೇಗೌಡನ ಹುಂಡಿ, ಪುಟ್ಟಯ್ಯನಹುಂಡಿ, ದಾಸನೂರು, ಚಿಕ್ಕಹೊಮ್ಮ, ದೊಡ್ಡಹೊಮ್ಮ ಹಾಗೂ ಹೆಗ್ಗವಾಡಿ ಗ್ರಾಮಸ್ಥರು ಬಂಡಿಗಳನ್ನು ಕಟ್ಟಿ, ಊರಲ್ಲಿ ಪೂಜೆ ಸಲ್ಲಿಸಿ ನಂತರ ಮೆರವಣಿಗೆ ಮೂಲಕ ಕಸ್ತೂರು ದೊಡ್ಡಮ್ಮತಾಯಿ ದೇವಾಲಯಕ್ಕೆ ಬಂದು, ಪ್ರದಕ್ಷಿಣೆ ಹಾಕುತ್ತಾರೆ.

ಬಂಡಿ ಕಟ್ಟುವ ಗ್ರಾಮಗಳ ಸುತ್ತಮುತ್ತಲಿನ ಗ್ರಾಮಗಳೂ ಉತ್ಸವದ ಭಾಗವಾಗಿವೆ.

23 ಗ್ರಾಮಗಳಲ್ಲಿ ಜಾತ್ರೆಯ ದಿನ ಹಬ್ಬದ ವಾತಾವರಣ ಮನೆ ಮಾಡುತ್ತದೆ. ದೂರದ ಊರುಗಳಲ್ಲಿ ನೆಲೆಸಿರುವ ಕುಟುಂಬಸ್ಥರು ಮನೆಗೆ ಬರುತ್ತಾರೆ. ಸ್ನೇಹಿತರು, ನೆಂಟರಿಷ್ಟರನ್ನು ಮನೆಗೆ ಆಹ್ವಾನ ಮಾಡಿ, ಹಬ್ಬದ ಊಟ ಬಡಿಸುತ್ತಾರೆ.

ವರ್ಷದ ಮೊದಲನೇ ಜಾತ್ರಾ ಮಹೋತ್ಸವವಾಗಿ ಕಸ್ತೂರು ಬಂಡಿ ಜಾತ್ರೆ ಜಿಲ್ಲೆಯ ಜಾತ್ರೆಗಳಿಗೆ ಮುನ್ನುಡಿ ಎಂದರೆ ತಪ್ಪಾಗಲಾರದು.

ತಾಲ್ಲೂಕು ಆಡಳಿತ ಜಾತ್ರಾ ಮಹೋತ್ಸವದ ಜವಾಬ್ದಾರಿ ಹೊತ್ತಿದ್ದು ಪೊಲೀಸ್ ಇಲಾಖೆ ಯಾವ್ದೆ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೂಬಸ್ತ್ ಕೂಡ ನಿಯೋಜನೆ ಮಾಡಿ ಯಶಸ್ವಿಯಾಗಿ ಜಾತ್ರೆ ನಡೆಯುವಂತೆ ಸಹಕಾರ ನೀಡಿದೆ.