ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ನಾಗರೀಕರ ಮೂಲಭೂತ ಸೌಲಭ್ಯಗಳಿಗೆ ವೆಚ್ಚ ಮಾಡಬೇಕಾದ ಅನುದಾನವನ್ನ ಜಿಲ್ಲಾ ಮಟ್ಟದ ಸರ್ಕಾರಿ ಅಧಿಕಾರಿಯೊರ್ವರು ಸ್ವ ಹಿತಾಸಕ್ತಿಗೋಸ್ಕರ ಬಳಕೆ ಮಾಡಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ.
ಚಾಮರಾಜನಗರ ಹಾಲಿ ಜಿಲ್ಲಾಧಿಕಾರಿ ರಮೇಶ್ ಅವರಿಗೆ ಕುಡಿಯುವ ಕಾವೇರಿ ನೀರಿನ ಬವಣೆ ಎದುರಾಗಿದೆಯಂತೆ. ಈ ಬವಣೆ ತಪ್ಪಿಸಿಕೊಳ್ಳಲು ಚಾಮರಾಜನಗರ ಜಿಲ್ಲಾಧಿಕಾರಿ ಮನೆಗೆ ಕಾವೇರಿ ನೀರು ಪೂರೈಕೆ ಮಾಡಲು ಪ್ರತ್ಯೇಕ ಟೆಂಡರ್ ಕರೆದು, ನೀರಿನ ಪೈಪ್ ಅಳವಡಿಸಲಾಗುತ್ತಿದೆ.
ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಜಿಲ್ಲಾಧಿಕಾರಿ ನಿವಾಸದಲ್ಲಿ ಬೊರ್ ವೆಲ್ ಹಾಗೂ ಕಾವೇರಿ ನೀರಿನ ಸಂಪರ್ಕ ಮೊದಲಿನಿಂದಲೂ ಇದೆ.
ಆದರೆ ಮೊದಲ ಮೂಲ ಸಂಪರ್ಕದಿಂದ ತಮ್ಮ ಮನೆಗೆ ನೀರು ಬಾರದ ಕಾರಣ ಹೊಸದಾಗಿ ಪಿಡಬ್ಲ್ಯೂಡಿ ಇಲಾಖೆ ಹತ್ತಿರ ಇರುವ ಪೈಪ್ ಲೈನ್ ನಿಂದ ಸುಮಾರು 700-800 ಮೀ ವರೆಗೆ ಒಂದಿಂಚು ಪೈಪ್ ಲೈನ್ ಅಳವಡಿಸಿ ಸಂಪರ್ಕ ಪಡೆದುಕೊಂಡಿದ್ದಾರೆ.
ಈಗಾಗಲೇ ಮೂಲ ಸೌಕರ್ಯವಿಲ್ಲದೇ ಸಾರ್ವಜನಿಕರು ಪರಿತಪಿಸುತ್ತಿರುವ ಈ ಸಮಯದಲ್ಲಿ ಜಿಲ್ಲಾಧಿಕಾರಿಗಳು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಳ್ಳುವ ಮೂಲಕ ತಮ್ಮ ಒಬ್ಬರದೇ ನಿವಾಸಕ್ಕೆ ಪೈಪ್ ಲೈನ್ ಅಳವಡಿಸಿಕೊಂಡಿರುವುದು ಎಷ್ಟು ಸಮಂಜಸ ಎಂದು ಚಾಮರಾಜ ನಗರದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ ನಗರಸಭೆ ವಾರ್ಡ್ 26ರ ವ್ಯಾಪ್ತಿಗೆ ಬರುವ ಈ ಮನೆಗೆ ನೀರಿನ ಸಂಪರ್ಕ ಒದಗಿಸಲು ಪ್ರತ್ಯೇಕ ಟೆಂಡರ್ ಕರೆಯಲಾಗಿದೆ. ಮೂಲ ಸೌಕರ್ಯಕ್ಕಾಗಿ ಜನ ಪರಿತಪಿಸುತ್ತಿರುವಾಗ, ಒಬ್ಬ ಅಧಿಕಾರಿಯ ಹೆಚ್ಚುವರಿ ಅನುಕೂಲಕ್ಕೆ ಹಣ, ಶ್ರಮ ಮತ್ತು ಅಧಿಕಾರದ ದುರುಪಯೋಗಪಡಿಸಿಕೊಳ್ಳುವ ಮೂಲಕ ಸಾರ್ವಜನಿಕ ಹಣ ದುಂದು ವೆಚ್ಚಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಸ್ಥಳೀಯ ಮತದಾರರಿಗೆ, ಹಾಗೂ ತೆರಿಗೆದಾರರಿಗೆ ಇಲ್ಲದ ಕನಿಷ್ಟ ಸವಲತ್ತುಗಳನ್ನು ಸ್ಥಳೀಯ ನಿವಾಸಿಗಳಲ್ಲದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಒದಗಿಸುವ ಔಚಿತ್ಯವೇನು? ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.
ಕರ್ನಾಟಕ ಆರ್ಥಿಕ ಸಂಹಿತೆ ಪರಿವಿಡಿ 15ರಡಿ ಸರ್ಕಾರಿ ಹಣ ಹೇಗೆ ಉಪಯೋಗಿಸಬೇಕೆಂಬ ನೀತಿ ನಿಯಮ ಇದೆ. ಅದರಲ್ಲಿ ಆರ್ಥಿಕ ಔಚಿತ್ಯ ಸೂತ್ರಗಳು ವಿವೇಚನಾಯುಕ್ತವಾಗಿ ಬಳಸಬೇಕೆಂಬುದು ಸ್ಪಷ್ಟವಾಗಿದೆ. ಹೀಗಿರುವಾಗ ಸರ್ಕಾರಿ ಹಣವನ್ನ ಕೇವಲ ಸ್ವಹಿತಾಸಕ್ತಿಗೆ ಬಳಕೆ ಮಾಡಿಕೊಳ್ಳುವ ಜೊತೆಗೆ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.