ಕತರ್ನಾಕ್  ಕಳ್ಳರ‌ಬಂಧನ: ಅಪಾರ ಪ್ರಮಾಣದ ಚಿನ್ನಾಭರಣ, ಹಣವಶ

ಮೈಸೂರು: ಮೈಸೂರು ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಕತರ್ನಾಕ್ ಕಳ್ಳರನ್ನು ಪೊಲೀಸರು ಬಂಧಿಸಿದ್ದು ಅಪಾರ ಪ್ರಮಾಣದ ಆಭರಣ,ಹಣ ವಶಪಡಿಸಿಕೊಂಡಿದ್ದಾರೆ.

ವಂಚನೆ ಪ್ರಕರಣ ಮತ್ತು ಮನೆ ಕಳವು ಮಾಡಿ ಚಿನ್ನಾಭರಣವನ್ನು ದೋಚಿದ್ದ ಕಳ್ಳರನ್ನು ಬಂಧಿಸಿ ಚಿನ್ನಾಭರಣ ಮತ್ತು ನಗದನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸೀಮಾ ಲಾಟ್ಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಂಜನಗೂಡು ತಾಲೂಕಿನ ಬದನವಾಳು ಗ್ರಾಮದ ಯುವತಿ ಹಿಮಶ್ವೇತಾ ಎಂಬವರು ಸೆನ್ ಪೊಲೀಸ್ ಠಾಣೆಯಲ್ಲಿ ತನಗೆ ಇನ್ಸ್ಟಾ ಗ್ರಾಂನಲ್ಲಿ ಪರಿಚಯವಾದ ರೋಬರ್ಟ್ ಎಡ್ಗರ್ ಎಂಬಾತನ ಬಗ್ಗೆ ದೂರು ನೀಡಿದ್ದರು.

ವಾಟ್ಸ್ ಆಪ್ ಚಾಟ್ ನಲ್ಲಿ ರೋಬರ್ಟ್ ಎಡ್ಗರ್ ಯುಕೆ ಯಲ್ಲಿರುವುದಾಗಿ ತಿಳಿಸಿದ್ದು ಐಫೋನ್ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ಗಿಫ್ಟ್ ಕಳುಹಿಸುತ್ತಿರುವುದಾಗಿ ತಿಳಿಸಿದ್ದ.  

ಡೆಲ್ಲಿ ಏರ್ ಪೋರ್ಟ್ ನಿಂದ  ಕರೆ ಮಾಡಿದ್ದು ಹಣವನ್ನು ಹಾಕಿ ಬಿಡಿಸಿಕೊಳ್ಳುವಂತೆ ತಿಳಿಸಿದ್ದ.

ಅದರಂತೆ ಹಿಮಶ್ವೇತಾ ,೭೭,೦೦೦ರೂ.ಗಳನ್ನು ವಿವಿಧ ಬ್ಯಾಂಕ್ ಖಾತೆಗೆ ಹಾಕಿದ್ದರು.ಆದರೆ ಯಾವುದೇ ಗಿಫ್ಟ್ ಬಂದಿಲ್ಲ.

ನಂತರ ಬಗ್ಗೆ ನಂಜನಗೂಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ತಮ್ಮ ಸೂಚನೆಯಂತೆ ಅಪರ ಪೊಲೀಸ್ ಅಧೀಕ್ಷಕಿ ಡಾ.ನಂದಿನಿ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಶಬ್ಬೀರ್ ಹುಸೇನ್ ಅವರ ತಂಡ ಮಾಹಿತಿ ಸಂಗ್ರಹಿಸಿ ಅಸ್ಸಾಂ ರಾಜ್ಯದ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.

ಪ್ರಕರಣ ಸಂಬಂಧ ೨ಕೀ ಪ್ಯಾಡ್, ೪ಸ್ಮಾರ್ಟ್ ಮೊಬೈಲ್ ಫೋನ್, ೨ಬ್ಯಾಂಕ್ ಪಾಸ್ ಬುಕ್ ಗಳು, ಮನೆ ಬಾಡಿಗೆ ಕರಾರು ಪತ್ರ, ೨೬,೦೦೦ರೂ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಅಸ್ಸಾಂ ರಾಜ್ಯದ ಕರೀಂ ಗಂಜ್ ಜಿಲ್ಲೆಯ ಬಾಲಿಪಿಪಿಲ ನೂರ್ಕಪುಂಜಿ ಗ್ರಾಮದ ಸಿಯಂಪುಯ್ ಹಾಲಂ ಎಂಬವಳು   ಬೆಂಗಳೂರಿನಲ್ಲಿ ಕೆಲಸ ಮಾಡುವಾಗ ನೈಜಿರಿಯಾ ವ್ಯಕ್ತಿಯನ್ನು ಪರಿಚಯ ಮಾಡಿಕೊಂಡಿದ್ದಳು.

ಆತ ಈಕೆಯ ದೂರದ ಸಂಬಂಧಿಕರು ಹಾಗೂ ನೆರೆ ಹೊರೆಯ ಗ್ರಾಮದವರಾದ ಆರೋಪಿಗಳನ್ನು ಬೆಂಗಳೂರಿಗೆ ಬರಮಾಡಿಕೊಂಡು ಅವರುಗಳ ಆಧಾರ್ ಕಾರ್ಡ್ ಅನ್ನು ಬೆಂಗಳೂರಿನ ವಿಳಾಸಕ್ಕೆ ಬದಲಾಯಿಸಿದ್ದ.

ಆರೋಪಿತಳಾದ ಸಿಯಂಪುಯ್ ಹಾಲಂಳಿಂದ ಬೇರೆ ಬೇರೆ ಹೆಸರಿನಲ್ಲಿ ೩೯ವಿವಿಧ ಬ್ಯಾಂಕ್ ಗಳಲ್ಲಿ ಖಾತೆಯನ್ನು ತೆರೆಸಿ ಅದಕ್ಕೆ ಸಂಬಂಧಪಟ್ಟ ಎಟಿಎಂ ಕಾರ್ಡ್, ಪಾಸ್ ಬುಕ್ ಅನ್ನು ನೈಜಿರಿಯಾ ಪ್ರಜೆ ಪಡೆದುಕೊಂಡು ಹಣವನ್ನು ಸಹ ಇವರ ಕಡೆಯಿಂದಲೇ ಡ್ರಾ ಮಾಡಿಸುತ್ತಿದ್ದ.

ಆರೋಪಿಗಳ ಹೆಸರಿನಲ್ಲಿ ಹಲವಾರು ಸಿಮ್ ಗಳನ್ನು ಪಡೆದು ಅವುಗಳನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿರುವುದು ಕೂಡ ವಿಚಾರಣೆಯಿಂದ ತಿಳಿದು ಬಂದಿದೆ.

ಆರೋಪಿಗಳೆಲ್ಲರೂ ಅಸ್ಸಾಂ ರಾಜ್ಯದ ಕರೀಂ ಗಂಜ್ ಜಿಲ್ಲೆಯವರು.ಇವರು ಇನ್ನೂ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ ಎಂದು ತಿಳಿಸಿದರು.

ಪತ್ತೆಕಾರ್ಯದಲ್ಲಿ ಪೊಲೀಸ್ ನಿರೀಕ್ಷಕ ಶಬ್ಬೀರ್ ಹುಸೇನ್, ಉಪನಿರೀಕ್ಷಕ ಲೋಕೇಶ್, ಸಿಬ್ಬಂದಿಗಳಾದ ಮಂಜುನಾಥ  ರಂಗಸ್ವಾಮಿ, ಮಂಜುನಾಥ ಬಿ.ವಿ, ಮಹದೇವಸ್ವಾಮಿ, ವೆಂಕಟೇಶ್, ಪುಷ್ಪಲತಾ, ಮಹೇಶ್, ಮಹೇಶಕುಮಾರ್, ಅಭಿಷೇಕ್, ಆದರ್ಶ, ಸಿಂಧು ಭಾಗಿಯಾಗಿದ್ದರು.

ಮತ್ತೊಂದು ಪ್ರಕರಣದಲ್ಲಿ ತನ್ನ ಮನೆಯ ಡಿಜಿಟಲ್ ಲಾಕರ್ ನಲ್ಲಿದ್ದ ಸುಮಾರು ೩ಕೆ.ಜಿ.೨೫೦ಗ್ರಾಂ ವಿವಿಧ ಮಾದರಿಯ ಚಿನ್ನದ ಒಡವೆಗಳು, ೧೨ಕೆ.ಜಿ ಬೆಳ್ಳಿಗಟ್ಟಿ, ೩೦ಲಕ್ಷರೂ. ಹಣವನ್ನು ಯಾರೋ ಕಳ್ಳರು ಕದ್ದೊಯ್ದಿದ್ದಾರೆಂದು ಟಿ.ನರಸೀಪುರ ಪಟ್ಟಣದಲ್ಲಿರುವ ಶ್ರೀನಿಧಿ ಡಿಸ್ಟ್ರಿಬ್ಯೂಟರ್ಸ್ ಮಾಲೀಕ ಶ್ರೀನಿವಾಸ ಎಂಬವರು ಟಿ.ನರಸೀಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದರ ಪತ್ತೆ ಕಾರ್ಯಾಚರಣೆಗೆ ತಮ್ಮ  ನಿರ್ದೇಶನದಲ್ಲಿ ಅಪರ ಪೊಲೀಸ್ ಅಧೀಕ್ಷಕಿ ಡಾ.ನಂದಿನಿ ಮಾರ್ಗದರ್ಶನದಲ್ಲಿ ನಂಜನಗೂಡು ಉಪವಿಭಾಗ  ಡಿ ಎಸ್ ಪಿ ಗೋವಿಂದರಾಜು ನೇತೃತ್ವದಲ್ಲಿ ಸಾಲಿಗ್ರಾಮ ಠಾಣೆಯ ಪಿಐ ಶ್ರೀಕಾಂತ್, ನಂಜನಗೂಡು ಪಟ್ಟಣ ವೃತ್ತದ ಸಿಪಿಐ ಲಕ್ಷ್ಮಿಕಾಂತ್ ತಳವಾರ್, ಟಿ.ನರಸೀಪುರ ಪೊಲೀಸ್ ಠಾಣೆಯ ಪಿಎಸ್ ಮಹೇಶ್ ಕುಮಾರ್, ಅಂತರಸಂತೆ ಪೊಲೀಸ್ ಠಾಣೆಯ ಪಿಎಸ್ ಜಯಪ್ರಕಾಶ್ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು ಎಂದು ತಿಳಿಸಿದರು.

ಪಿಎಸ್ ಮಹೇಶ್ ಕುಮಾರ್ ಅವರ ತಂಡವು ಆಂಧ್ರಪ್ರದೇಶದ ಹಿಂದುಪುರ, ಬತ್ತಲಪಲ್ಲಿ, ಪೆನುಕೊಂಡ, ಪುಟ್ಪಪರ್ತಿ, ಪರಿಗಿ, ಧರ್ಮಾವರಂ, ಅನಂತಪುರ, ಹೈದ್ರಾಬಾದ್ ಕಡೆಗಳಲ್ಲಿ ಮಾಹಿತಿ ಕಲೆ ಹಾಕಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದರು.

ಆರೋಪಿಯು ಹಾಸನ ಜೈಲಿನಲ್ಲಿರುವ ಆರೋಪಿಯೊಂದಿಗೆ ಹಾಗೂ ತನ್ನ ಇನ್ನಿಬ್ಬರು ಸಹಚರರೊಂದಿಗೆ ಟಿ.ನರಸೀಪುರ ಟೌನ್ ಗೆ ಬಂದು ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಆರೋಪಿಯಿಂದ ೭೯,೫೧೦ಗ್ರಾಂ ಚಿನ್ನ , ೪೯೯.೨೬೦ ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ.

ಕಳ್ಳತನದ ಆರೋಪಿಗಳ ತಂಡವು ಗದಗ ಜಿಲ್ಲೆ, ಬೈಲಹೊಂಗಲಗಳಲ್ಲೂ ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಗೊತ್ತಾಗಿದೆ.

ಟಿ.ನರಸೀಪುರದ ಎರಡು ಪ್ರಕರಣಗಳು, ಗದಗ ಜಿಲ್ಲೆಯ ಒಂದು ಪ್ರಕರಣ, ಬೈಲಹೊಂಗಲದಲ್ಲಿ ಒಂದು ಪ್ರಕರಣ, ನಿಪ್ಪಾಣಿಯ ಒಂದು ಪ್ರಕರಣ, ಒಟ್ಟು ಐದು ಪ್ರಕರಣಗಳಲ್ಲಿ ಆರೋಪಿ ಭಾಗಿಯಾಗಿರುವುದು ತಿಳಿದು ಬಂದಿದೆ.

ಆರೋಪಿಗಳ ಪೈಕಿ ಒಬ್ಬ ಹಾಸನ ಜೈಲಿನಲ್ಲಿದ್ದು ಉಳಿದ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಶೀಘ್ರವೇ ಅವರನ್ನೂ ಬಂಧಿಸಲಾಗುವುದು ಎಂದು ಎಸ್ಪಿ ಸೀಮಾ ತಿಳಿಸಿದರು.

ಪತ್ತೆಕಾರ್ಯದಲ್ಲಿ ಪಿಎಸ್ ಆರತಿ, ಎಎಸ್ ಸತೀಶ್, ಸಿಬ್ಬಂದಿಗಳಾದ ಭಾಸ್ಕರ್, ಅಶೋಕ್, ವಸಂತಕುಮಾರ್, ಜಯಕುಮಾರ್, ಅಶ್ವಿತಾ ಭಾಗವಹಿಸಿದ್ದರು.ಈ ಪತ್ತೆ ಕಾರ್ಯವನ್ನು ಶ್ಲಾಘಿಸಿದ ಎಸ್ಪಿ ಬಹುಮಾನ ಘೋಷಿಸಿದರು.