ನೆಲಮಂಗಲ: ಪ್ರಿಯಾಂಕಾ ಗಾಂಧಿಯವರು ಹೋದ ಕಡೆಗಳಲ್ಲಿ ಕಾಂಗ್ರೆಸ್‌ಗೆ ಸೀಟುಗಳೇ ಬರುವುದಿಲ್ಲ. ರಾಜ್ಯಕ್ಕೆ ಅವರು ಬರದೇ ಇದ್ದಲ್ಲಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಒಂದಷ್ಟು ಸೀಟುಗಳಾದರೂ ದೊರೆಯುತ್ತಿತ್ತು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ನೆಲಮಂಗಲದಲ್ಲಿ ತಾಲೂಕು ಬಿಜೆಪಿ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಸಚಿವರು ಮಾತನಾಡಿದರು.
ಪ್ರಿಯಾಂಕಾ ಗಾಂಧಿಯವರು ಉತ್ತರ ಪ್ರದೇಶಕ್ಕೆ ಹೋಗದೇ ಇದ್ದಿದ್ದರೆ ಆ ಪಕ್ಷಕ್ಕೆ ಸ್ವಲ್ಪ ಸೀಟುಗಳು ಬರುತ್ತಿತ್ತು. ಅವರು ಅಲ್ಲಿಗೆ ಹೋಗಿದ್ದರಿಂದಲೇ ಸ್ಥಾನಗಳನ್ನು ಕಳೆದುಕೊಳ್ಳಬೇಕಾಯಿತು ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಹಿಳಾ ಸಬಲೀಕರಣಕ್ಕೆ ನೀಡಿರುವ ಆದ್ಯತೆಯನ್ನು ಹಿಂದಿನ ಸರ್ಕಾರಗಳು ನೀಡಿಲ್ಲ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮಾಡುವ ಘೋಷಣೆ, ಘೋಷಣೆಯಾಗಿಯೇ ಉಳಿಯುತ್ತದೆ. ಬಿಜೆಪಿಯು ಚುನಾವಣೆಗೆ ಹೋಗುವ ಮುನ್ನ ನಿರ್ದಿಷ್ಟವಾದ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಲಿದ್ದಾರೆ. ರಾಜ್ಯದ ಪ್ರತಿ ಮಹಿಳೆಯರ ಸಬಲೀಕರಣಕ್ಕೆ ಅವರು ಉತ್ತಮ ಕಾರ್ಯಕ್ರಮ ನೀಡಲಿದ್ದಾರೆ ಎಂದರು.
ವಿರೋಧ ಪಕ್ಷಗಳು ರಾಜ್ಯ ಬಿಜೆಪಿ ಸರ್ಕಾರದ ಬಗ್ಗೆ ಆರೋಪಗಳನ್ನು ಮಾಡಲು ಆರಂಭಿಸಿವೆ. ಚುನಾವಣೆಯ ಹೊಸ್ತಿಲಲ್ಲಿ ಇದು ಸಹಜವಾಗಿದೆ. ಭ್ರಷ್ಟಾಚಾರದ ಆಪಾದನೆಗಳನ್ನು ಯಾರಾದರೂ ಮಾಡಿದರೆ, ಅದನ್ನು ಯಾವ ಪಕ್ಷ ಹಾಗೂ ಯಾವ ಮುಖಂಡರು ಮಾಡಿದ್ದಾರೆ ಎಂದು ತಿಳಿದುಕೊಂಡು ತನಿಖೆ ಮಾಡಬೇಕು. ಹಿಂದಿನ ಸರ್ಕಾರದ್ದೂ ತನಿಖೆ ಮಾಡಬೇಕು. ಆಗ ಮಾತ್ರ ಯಾವುದು ಸತ್ಯ, ಅಸತ್ಯ ಎಂದು ತಿಳಿದುಬರುತ್ತದೆ ಎಂದರು.
ನೆಲಮಂಗಲದ ಅಪಘಾತ ಆರೈಕೆ ಆಸ್ಪತ್ರೆಯಲ್ಲಿ ಸಿಬ್ಬಂದಿ ನೇಮಕಾತಿಯ ಪ್ರಕ್ರಿಯೆ ಆರಂಭವಾಗಿದೆ. ನೆಲಮಂಗಲದ ಮೇಲೆ ವಿಶೇಷ, ಕಾಳಜಿ, ಅಭಿಮಾನ ಇರುವುದರಿಂದಲೇ ಈ ಕ್ರಮ ವಹಿಸಲಾಗಿದೆ. ಆದರೆ ಇಲ್ಲಿನ ಶಾಸಕರು ನೇಮಕಾತಿ ಬಗ್ಗೆ ರಾಜಕೀಯವಾಗಿ ಹೇಳಿಕೆ ನೀಡುತ್ತಿದ್ದಾರೆ. ಅವರು ವೈದ್ಯರಾಗಿಯೂ ಇಷ್ಟು ವರ್ಷಗಳಲ್ಲಿ ಏನೂ ಮಾಡಿಲ್ಲ ಎಂದರು.