ಶ್ರೀರಂಗಪಟ್ಟಣ: ಆದಿರಂಗ ಎಂದೇ ಪ್ರಸಿದ್ಧಿ ಪಡೆದಿರುವ ನಾಡಿನ ಆರಾಧ್ಯ ದೈವ ಶ್ರೀರಂಗನಾಥಸ್ವಾಮಿ ಬೆಣ್ಣೆ ಅಲಂಕಾರದಲ್ಲಿ ಕಂಗೊಳಿಸಿದನು.
ಜತೆಗೆ ಸನ್ನಿಧಿಯಲ್ಲಿ ವಿಜೃಂಬಣೆಯ ಲಕ್ಷ ದೀಪೋತ್ಸವ ಇದ್ದುದರಿಂದ ಇಡೀ ದೇವಾಲಯ ಕಂಗೊಳಿಸುತ್ತಿತ್ತು.ಇದಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.
ಪಟ್ಟಣದ ಲಕ್ಷ ದೀಪೋತ್ಸವ ಆಚರಣಾ ಸಮಿತಿ 29 ವರ್ಷಗಳಿಂದ ದೀಪೋತ್ಸವ ಆಚರಿಸಿಕೊಂಡು ಬರುತ್ತಿದೆ.
ದೇವಾಲಯದ ಮುಂದಿನ 200 ಮೀಟರ್ ಉದ್ದ ಲಂಬವಾಗಿ ದೀಪಗಳನ್ನು ಜೋಡಿಸಿ ಬೆಳಗಲಾಯಿತು.
ಪೂರ್ವ– ಪಶ್ಚಿಮವಾಗಿ ದೇವಾಲಯದ ರಾಯ ಗೋಪುರದಿಂದ ಗಂಡಭೇರುಂಡ ವೃತ್ತದ ವರೆಗೆ ದೀಪಗಳನ್ನು ನೀಟಾಗಿ ಜೋಡಿಸಿ ಜೋತಿ ಬೆಳಗಿಸಿ ಭಕ್ತರು ಕಣ್ತುಂಬಿಕೊಂಡರು.
ಸಿಮೆಂಟ್ ರಸ್ತೆಯ ಮೇಲೆ ಹಾಗೂ ಇಕ್ಕೆಲಗಳಲ್ಲಿ ಅಡಿಕೆ ಮರದ ದಬ್ಬೆಗಳನ್ನು ಇಟ್ಟು 12 ಸಾಲುಗಳಲ್ಲಿ ಮಣ್ಣಿನ ದೀಪಗಳನ್ನು ಜೋಡಿಸಿ ಎಣ್ಣೆ ಹಾಕಿ ಜ್ಯೋತಿ ಬೆಳಗಿಸಿ ಭಕ್ತಿ ಪ್ರದರ್ಶಿಸಲಾಯಿತು.
ಇದಕ್ಕಾಗಿ ಒಂದು ಸಾವಿರ ಲೀಟರ್ ಎಣ್ಣೆ ಬಳಸಲಾಗಿತ್ತು. ಗೋಧೂಳಿ ಲಗ್ನದಲ್ಲಿ ಸಂಜೆ 6.30ಕ್ಕೆ ಆರಂಭವಾದ ದೀಪೋತ್ಸವ ರಾತ್ರಿ 12 ಗಂಟೆವರೆಗೂ ಸಾಗರೋಪಾದಿಯಲ್ಲಿ ಜನ ಬಂದು ಕಣ್ತುಂಬಿಕೊಂಡರು
ಶ್ರೀರಂಗನಾಥಸ್ವಾಮಿ ದೇಗುಲ ಮಾತ್ರವಲ್ಲದೆ ಐತಿಹಾಸಿಕ ಗಂಗಾಧರ, ಲಕ್ಷ್ಮಿನರಸಿಂಹ ಹಾಗೂ ಪೇಟೆ ನಾರಾಯಣಸ್ವಾಮಿ ದೇವಾಲಯಗಳ ಆವರಣದಲ್ಲೂ ಕೂಡ ದೀಪಗಳನ್ನು ಬೆಳಗಿಸಲಾಯಿತು.
ಒಂದು ರೀತಿ ಇಡೀ ಶ್ರೀರಂಗಪಟ್ಟಣವೇ ದೀಪಗಳ ಜ್ಯೋತಿಯಿಂದ ಕಂಗೊಳಿಸುತ್ತಿತ್ತು.
ದೀಪದಿಂದ ದೀಪ ಬೆಳಗಿಸಲು ಸ್ಥಳೀಯರು ಮಾತ್ರವಲ್ಲದೆ ಮಂಡ್ಯ, ಮೈಸೂರು ಮತ್ತಿತರೆಡೆಗಳಿಂದ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಜನರು ತಂಡೋಪತಂಡವಾಗಿ ಆಗಮಿಸಿದ್ದರಿಂದ ಜನ ಜಾತ್ರೆಯೇ ನೆರೆದಿತ್ತು.
ಲಕ್ಷ ದೀಪೋತ್ಸವದ ಜತೆಗೆ ಶ್ರೀರಂಗನಾಥಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಿ ವಿಶೇಷವಾಗಿ ಪೂಜಿಸಲಾಯಿತು.
ಇದೊಂದು ಅದ್ಭುತ ಕ್ಷಣ.
ಸ್ವಾಮಿಗೆ ಬೆಣ್ಣೆ ಅಲಂಕಾರಕ್ಕೆಂದೇ ಹತ್ತಾರು ಕೆ.ಜಿ. ಬೆಣ್ಣೆಯನ್ನು ಭಕ್ತರು ಉಚಿತವಾಗಿ ನೀಡುತ್ತಾರೆ.
ಮಕರ ಸಂಕ್ರಾಂತಿಯಂದು ಇಲ್ಲಿ ಸ್ವರ್ಗದ ಬಾಗಿಲು ತೆರೆದು ಭಕ್ತರಿಗೆ ವಿಶೇಷ ಸೇವೆ ಒದಗಿಸುವ ಪದ್ಧತಿ ಶತಮಾನಗಳಿಂದ ನಡೆದುಕೊಂಡು ಬಂದಿದೆ ಹಾಗಾಗಿ ಸಾಗರೋಪಾದಿಯಲ್ಲಿ ಜನ ಬಂದಿದ್ದರು.
ಪ್ರತಿ ವರ್ಷ ಸಂಕ್ರಾಂತಿಯಂದು ಶ್ರೀರಂಗನಾಥಸ್ವಾಮಿ ಸನ್ನಿಧಿಯಲ್ಲಿ ಲಕ್ಷ ದೀಪೋತ್ಸವ ನಡೆಯುತ್ತಾ ಬಂದಿದೆ.
ಲಕ್ಷ ದೀಪೋತ್ಸವ ಆಚರಣಾ ಸಮಿತಿ ಉಸ್ತುವಾರಿಯಲ್ಲಿ ನಡೆದ ಈ ದೀಪೋತ್ಸವಕ್ಕೆ ಅಭಿನವ ಭಾರತ ತಂಡ ಮತ್ತಿತರ ಸಂಘ, ಸಂಸ್ಥೆಗಳು ಸಹಕಾರ ನೀಡಿದವು.