ಶ್ರೀರಂಗಪಟ್ಟಣ: ವೈದ್ಯಕೀಯ ಲೋಕದಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಇಂದಿಗೂ ರಕ್ತವನ್ನು ಸಿದ್ಧಪಡಿಸುವಂತಹ ಪ್ರಕ್ರಿಯೆ ಯಶಸ್ವಿಯಾಗಿಲ್ಲ. ಹೀಗಾಗಿ ರಕ್ತವು ಒಬ್ಬರಿಂದ ಇನ್ನೊಬ್ಬರ ದೇಹಕ್ಕೆ ವರ್ಗಾವಣೆಯಾಗಲೇಬೇಕಾಗಿದೆ ಎಂದು ಪರಿವರ್ತನ ಸಂಸ್ಥೆಯ ಡಾ. ಪುಟ್ಟೇಗೌಡ ಅವರು ತಿಳಿಸಿದರು.
ಪಟ್ಟಣದ ಪರಿವರ್ತನ ಶಾಲಾ ಸಮೂಹ ಮತ್ತು ಡಾ. ಎಂ ಪುಟ್ಟೇಗೌಡ ಫೌಂಡೇಶನ್ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‍ಎಸ್‍ಎಸ್ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಬುಧವಾರ ಶ್ರೀರಂಗಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಡಾ. ಪುಟ್ಟೇಗೌಡ ಅವರು ಶಿಬಿರದಲ್ಲಿ ಭಾಗವಹಿಸಿ ಮಾತನಾಡಿ, ರಕ್ತ ಮನುಷ್ಯನ ದೇಹದಲ್ಲಿ ಮಾತ್ರ ಉತ್ಪತ್ತಿ ಆಗುತ್ತದೆ ಎಂದ ಅವರು, ರಕ್ತ ದಾನಕ್ಕೆ ಯುವಕರು ಮುಂದಾಗಬೇಕೆಂದು ಕರೆ ನೀಡಿದರು.
ಮನುಷ್ಯನ ವಯಸ್ಸು ರಕ್ತದ ಶುದ್ಧತೆಯ ಮಾನದಂಡವಾಗಿದ್ದು ವಯೋವೃದ್ದರ ದೇಹದಿಂದ ರಕ್ತವನ್ನು ಪಡೆದರೂ ಹೆಚ್ಚು ಪ್ರಯೋಜನಕ್ಕೆ ಬರುವುದಿಲ್ಲ. ಅವರಲ್ಲಿ ರಕ್ತದ ಉತ್ಪದನಾ ಸಾಮಥ್ರ್ಯವೂ ಕಡಿಮೆಯಾಗಿರುತ್ತದೆ. ಇದರಿಂದ ರೋಗಿಯ ದೇಹಕ್ಕೆ ವೃದ್ಧರ ರಕ್ತ ಸೂಕ್ತವಾಗಿರುವುದಿಲ್ಲ ಹಾಗಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದಾಗುವಂತೆ ಅವರು ತಿಳಿಸಿದರು.
ಈ ಹಿಂದೆ ವಿದ್ಯಾವಂತರೂ ರಕ್ತದಾನ ಎಂದರೆ ದೂರ ಉಳಿಯುತ್ತಿದ್ದರು. ರಕ್ತದಾನ ಕುರಿತು ಇದ್ದ ತಪ್ಪು ಕಲ್ಪನೆಗಳೇ ಅದಕ್ಕೆ ಕಾರಣ. ಇತ್ತೀಚಿನ ವರ್ಷಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದು ರಕ್ತದಾನದಲ್ಲಿ ತಾಲೂಕು ಜಿಲ್ಲೆಯಲ್ಲೇ ಮೊದಲ ಸ್ಥಾನದಲ್ಲಿ ಇದೆ. ಇದಕ್ಕೆ ರೆಡ್ಯಾಸ್ ಸೊಸೈಟಿ, ಅಧಿಕಾರಿಗಳು, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ತೋರಿದ ಆಸಕ್ತಿ ಕಾರಣ ಎಂದರು.
ಶ್ರೀರಂಗಪಟ್ಟಣದ ಸಾರ್ವಜನಿಕರು, ಸ್ವಯಂ ಪ್ರೇರಿತ ರಕ್ತ ದಾನಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ರಕ್ತವನ್ನು ದಾನ ಮಾಡಿ ಸಾರ್ಥಕತೆ ಮೆರೆದರು.