ಬೆಂಗಳೂರು ಗ್ರಾಮಾಂತರ: ಗಣರಾಜ್ಯದ ಪರಿಕಲ್ಪನೆಗೆ ಪೂರಕವಾಗಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಭಾರತೀಯ ಸೇನೆಯನ್ನು ಬಲಪಡಿಸುವ ಹಾಗೂ ದೇಶದಲ್ಲಿ ಐಕ್ಯತೆ ತರುವ ಕೆಲಸ ಮಾಡಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.
74 ನೇ ಗಣರಾಜ್ಯೋತ್ಸವ ಪ್ರಯುಕ್ತ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಕೂಡ ಜನರು ಅರಿಯಬೇಕು ಎಂದು ಸಲಹೆ ನೀಡಿದರು.
ಗಡಿ ಕಾಯುವ ಯೋಧರ ಜೊತೆ ದೀಪಾವಳಿ ಆಚರಿಸಿದ ಏಕೈಕ ಪ್ರಧಾನಿ ನರೇಂದ್ರ ಮೋದಿಯವರು. ಹಾಗೆಯೇ ಅವರು ಸೇನೆಯನ್ನು ಬಲಪಡಿಸಲು ಅನೇಕ ಕಾರ್ಯಕ್ರಮ ರೂಪಿಸಿದ್ದಾರೆ.
ಭಾರತೀಯ ಸೇನೆಯಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಎಂಬ ಹುದ್ದೆ ಆರಂಭಿಸಲಾಗಿದೆ. ರಕ್ಷಣಾ ಉದ್ಯಮವನ್ನು ಉತ್ತಮವಾಗಿ ಬೆಳೆಸಲಾಗಿದೆ. ಈ ಕ್ಷೇತ್ರದ ಉತ್ಪನ್ನಗಳ ರಫ್ತು ಶೇ.700 ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಪರಾಕ್ರಮ ದಿನವಾಗಿ ಆಚರಿಸುತ್ತಿದ್ದು, ಕರ್ತವ್ಯ ಪಥದ ಬಳಿ ಅವರ ಪ್ರತಿಮೆ ಸ್ಥಾಪಿಸಲಾಗಿದೆ.
ಕರ್ನಾಟಕದವರಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯನವರು ಸೇನೆಯ ಮುಖ್ಯಸ್ಥ ಹುದ್ದೆ ಹೊಂದಿದ್ದರು. ಮೊದಲ ಬಾರಿಗೆ ಆರ್ಮಿ ಡೇ ಪೆರೇಡ್‌ನ್ನು ದೆಹಲಿಯಿಂದ ಹೊರಗೆ ಬೆಂಗಳೂರಿನಲ್ಲೇ ಆಚರಿಸಿ ಸೇನಾನಿಗಳಿಗೆ ಗೌರವ ಸಲ್ಲಿಸಲಾಗಿದೆ.
ಜಮ್ಮು-ಕಾಶ್ಮೀರ ನಮ್ಮ ದೇಶದಲ್ಲೇ ಇದ್ದರೂ, ಅದು ಪ್ರತ್ಯೇಕವಾದಂತಿತ್ತು. ಅಲ್ಲಿ ಕೂಡ ವಿಶೇಷ ಸ್ಥಾನಮಾನ ರದ್ದು ಮಾಡಿ ಗಣರಾಜ್ಯ ಎಂಬುದನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಹೇಳಿದರು
ಜಿ-20 ಯ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದ್ದು, ಬೆಂಗಳೂರಿನಲ್ಲೂ ಶೃಂಗಸಭೆ ನಡೆಯಲಿದೆ. ಇದು ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಸಂದ ಅತಿ ದೊಡ್ಡ ಗೌರವ ಎಂದು ಸಚಿವರು ತಿಳಿಸಿದರು.
ಎಚ್‌ಎನ್ ವ್ಯಾಲಿ ಜೊತೆಗೆ ಎತ್ತಿನಹೊಳೆ ಯೋಜನೆಗೆ ಒತ್ತು ನೀಡಿದ್ದು, 23 ಸಾವಿರ ಕೋಟಿ ರೂ. ಮೊತ್ತದ ಪರಿಷ್ಕೃತ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ.ವರ್ಷದೊಳಗೆ ಎತ್ತಿನಹೊಳೆ ನೀರು ಈ ಭಾಗಗಳಿಗೆ ದೊರೆಯಲಿದೆ ಎಂದು ಸುಧಾಕರ್ ಹೇಳಿದರು