ರಥ ಸಪ್ತಮಿ ಪ್ರಯುಕ್ತ ರಂಗನಾಥನ ಬ್ರಹ್ಮರಥೋತ್ಸವ

ಶ್ರೀರಂಗಪಟ್ಟಣ: ರಥ ಸಪ್ತಮಿ ಪ್ರಯುಕ್ತ ಶ್ರೀರಂಗಪಟ್ಟಣದಲ್ಲಿ ಶ್ರೀ ರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು.

ಉಭಯ ಕಾವೇರಿ ಮಧ್ಯೆ ವಿರಾಜಮಾನರಾಗಿ ಆದಿರಂಗ ಕ್ಷೇತ್ರವೆಂದೂ, ಶ್ರೀಮತ್ ಪಶ್ಚಿಮರಂಗ ಕ್ಷೇತ್ರವೆಂದೂ ಗೌತಮ ಕ್ಷೇತ್ರವೆಂದೂ ಬ್ರಹ್ಮಾಂಡ ಪ್ರಸಿದ್ಧವಾಗಿ, ಸ್ವಯಂ ವ್ಯಕ್ತರಾಗಿ, ಗೌತಮ ಋಷಿಗಳಿಂದ ಆರಾಧಿಸಲ್ಪಟ್ಟು, ಭಕ್ತಾಭೀಷ್ಟ ಫಲಪ್ರದನಾಗಿರುವ ಶ್ರೀಮತ್ ಪಶ್ಚಿಮ ರಂಗನಾಥಸ್ವಾಮಿಯ ರಥೋತ್ಸವ ಅದ್ದೂರಿಯಿಂದ ನಡೆಯಿತು.

ರಥ ಸಪ್ತಮಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಸೂರ್ಯನ ರಥಕ್ಕೆ ಏಳು ಕುದುರೆಗಳು. ಅವುಗಳ ಹೆಸರು ಗಾಯತ್ರಿ, ಬೃಹತೀ, ಉಷ್ಣಿಕ್, ಜಗತೀ, ತ್ರಿಷ್ಟುಪ್, ಅನುಷ್ಟುಪ್ ಮತ್ತು ಪಂಕ್ತಿ.

ಈ 7 ಕುದುರೆಗಳು ಎಳೆಯುವ ರಥದಲ್ಲಿ ಸಂಚರಿಸುವ ಸೂರ್ಯ ದೇವರ ದೊಡ್ಡ ಹಬ್ಬ ಇದಾಗಿದೆ.

ಇದು ವಸಂತಕಾಲವನ್ನು ಮುನ್ಸೂಚಿಸುವ ಮತ್ತು ಶೀತ ಚಳಿಗಾಲದ ತಿಂಗಳುಗಳಿಗೆ ವಿದಾಯ ಹೇಳುವ ಹಬ್ಬವಾಗಿದೆ.
ಈ ದಿನ, ಸೂರ್ಯನು ತನ್ನ ದುರ್ಬಲ ವರ್ತನೆಯನ್ನು ಬಿಟ್ಟು ತನ್ನೆಲ್ಲಾ ಶಕ್ತಿ ಮತ್ತು ಪ್ರಕಾಶದಿಂದ ಹೊಳೆಯಲು ಪ್ರಾರಂಭಿಸುತ್ತಾನೆ ಎಂದು ನಂಬಲಾಗಿದೆ.

ಇದು ಸೂರ್ಯ ದೇವರ ಹಬ್ಬವಾಗಿರುವುದರಿಂದ, ಇದನ್ನು ಭಾರತದಾದ್ಯಂತದ ಸೂರ್ಯ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಸೂರ್ಯ ದೇವರ ಅವತಾರವೆಂದು ಪರಿಗಣಿಸಲ್ಪಟ್ಟ ಭಗವಾನ್ ವಿಷ್ಣುವನ್ನು ಸಾಮಾನ್ಯವಾಗಿ ರಥ ಸಪ್ತಮಿಯಂದು ಪೂಜಿಸಲಾಗುತ್ತದೆ.

ಈ ದಿನ ಭಕ್ತರು ನದಿ / ಕೆರೆ-ಕೊಳ ಅಥವಾ ಸಮುದ್ರದಲ್ಲಿ ಸ್ನಾನ ಮಾಡಿ ನಂತರ ಗಾಯತ್ರಿ ಮಂತ್ರದಂತಹ ಸೂರ್ಯ ಮಂತ್ರ ಜಪಿಸಿ, ಆ ನಂತರ ಸೂರ್ಯ ದೇವನನ್ನು ಪೂಜಿಸಿ ಹಾಲು ಮತ್ತು ಜಲದಿಂದ ನೈವೇದ್ಯವನ್ನು ಅರ್ಪಿಸುತ್ತಾರೆ.

ಪ್ರಾತಃ ಕಾಲದಲ್ಲಿ ಶ್ರೀರಂಗಪಟ್ಟಣದ ಶ್ರೀ ರಂಗನಾಥನ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಪೇಟೆ ಬೀದಿಯಲ್ಲಿ ಸೂರ್ಯ ಮಂಡಲ ಮತ್ತು ಚಂದ್ರಮಂಡಲ ಉತ್ಸವ ಪ್ರಾರಂಭಗೊಂಡು ಮಧ್ಯಾಹ್ನದ ವೇಳೆಗೆ ದೇವಸ್ಥಾನ ಮುಂಭಾಗದಿಂದ ಮಹಾ ವಿಷ್ಣು ರೂಪವಾದ ಶ್ರೀ ರಂಗನಾಥ ಸ್ವಾಮಿಯ ಉತ್ಸವ ಮೂರ್ತಿಯನ್ನು ಪೂಜಿಸಿ ಬ್ರಹ್ಮರಥದ ಮೇಲೆ ಪ್ರತಿಷ್ಠಾಪನೆ ಮಾಡಿ ಮಹಾ ಮಂಗಳಾರತಿ ನೆರವೇರಿಸಿ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಬೃಹದ್ರಥವನ್ನು ಎಳೆಯಲು ಶ್ರೀರಂಗಪಟ್ಟಣದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಿಂದ ಸಾವಿರಾರು ಭಕ್ತಾದಿಗಳು ಬಂದು ಮಹಾ ವಿಷ್ಣುವಿನ ಮಹಾ ರಥವನ್ನು ಎಳೆದು ದೇವರ ಕೃಪೆಗೆ ಪಾತ್ರರಾದರು.
ಶ್ರೀರಂಗಪಟ್ಟಣದ ಜನತೆ ದೂರದ ಊರಿನಿಂದ ಬಂದಂತಹ ಭಕ್ತಾದಿಗಳಿಗೆ ಮಜ್ಜಿಗೆ, ಪಾನಕ, ಕೋಸಂಬರಿ ಪ್ರಸಾದ ವಿನಿಯೋಗ ಮಾಡಿದರು.

ಬಿಸಿಲಿನಿಂದ ಬಸವಳಿದವರಿಗೆ ಮಜ್ಜಿಗೆ ಪಾನಕ ಕೊಡುವ ಮೂಲಕ ಅವರ ದಣಿವನ್ನು ಪಟ್ಟಣದ ಜನತೆ ನೀಗಿಸಿದರು.

ಶ್ರೀ ರಂಗನಾಥನ ರಥೋತ್ಸವವನ್ನು ಸಾವಿರರು ಮಂದಿ ಭಕ್ತರು, ದೇಶ ವಿದೇಶಗಳ ಪ್ರವಾಸಿಗರು ವೀಕ್ಷಿಸಿ ದೇವರ ಕೃಪೆಗೆ ಪಾತ್ರರಾದರು.