ಎಗ್ಗಿಲ್ಲದೆ ನಡೆದಿದೆ ಸರ್ಕಾರಿ ವಾಹನಗಳ ದುರುಪಯೋಗ

(ರಾಮಸಮುದ್ರ ಎಸ್.ವೀರಭದ್ರ ಸ್ವಾಮಿ)

ಚಾಮರಾಜನಗರ : ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಸೇರಿದಂತೆ ಬಹುತೇಕ ಸರ್ಕಾರಿ ವಾಹನಗಳು ಖಾಸಗೀ ವಾಹನಗಳಾಗಿ ದುರ್ಬಳಕೆಯಾಗುತ್ತಿದೆ.

ಈ ಸಂಬಂಧ ಇಲ್ಲಿಯ ಅಧಿಕಾರಿ ವರ್ಗದವರನ್ನ  ಹೇಳುವವರೂ ಕೇಳುವವರೂ ಇಲ್ಲದಂತಾಗಿದೆ.

ಸರ್ಕಾರಿ ಕಚೇರಿ ಕೆಲಸದ ಸಮಯ ಬೆಳಿಗ್ಗೆ 10.30 ರಿಂದ ಸಂಜೆ 5.30.ಆದರೆ ಈ ಅವಧಿಯಲ್ಲಿ ಅಲ್ಲದೇ ಇತರ ಕೆಲಸ ಕಾರ್ಯಗಳಿಗೂ ಸರ್ಕಾರಿ ವಾಹನ ಬಳಕೆಯಾಗುತ್ತಿವೆ.

ಚಾಮರಾಜನಗರದಲ್ಲಿ ಮುಂಜಾನೆಯಿಂದಲೇ ಸರ್ಕಾರಿ ವಾಹನಗಳ ಆರ್ಭಟ ಪ್ರಾರಂಭವಾದರೆ ರಾತ್ರಿ 10.30 ರ ವರೆಗೂ ಖಾಸಗೀ ವಾಹನಗಳಂತೆ ಸಂಚರಿಸುತ್ತವೆ.

ಮೈಸೂರಿನಿಂದ ರೈಲಿನಿಂದ ಬರುವ ಅಧಿಕಾರಿಗಳನ್ನು ಕರೆದುಕೊಂಡುಬರಲು ಸರ್ಕಾರಿ ವಾಹನಗಳು ರೈಲ್ವೇ ನಿಲ್ದಾಣದಲ್ಲಿ ಸಾಲುಗಟ್ಟಲೆ ಕಾಯುತ್ತ ನಿಲ್ಲುತ್ತವೆ.

ಅಷ್ಟೇ ಅಲ್ಲ ಸಂಜೆ ಕೂಡ ಜಿಲ್ಲಾಡಳಿತ ಭವನದಿಂದ ಹೊರಡುವ ಅನೇಕ ಸರ್ಕಾರಿ ವಾಹನಗಳು ರೈಲ್ವೇ ನಿಲ್ದಾಣ, ಸರ್ಕಾರಿ ಬಸ್ ನಿಲ್ದಾಣಕ್ಕೂ ಅಧಿಕಾರಿಗಳನ್ನು ಹೂಡುವ ವಾಹನಗಳಾಗಿ ಉಪಯೋಗಿಸಲ್ಪಡುತ್ತಿವೆ.

ಕೆಲವು ಚಾಲಕರು ಅಧಿಕಾರಿಗಳನ್ನು ರೈಲ್ವೇ ನಿಲ್ದಾಣದಕ್ಕೂ, ಸರ್ಕಾರಿ ಬಸ್ ನಿಲ್ದಾಣಕ್ಕೂ ಬಿಟ್ಟು ನಂತರ ಸ್ವ ಬಳಕೆಗೆ ಉಪಯೋಗಿಸುತ್ತಾರೆ.

ಇಂದನದ ವೆಚ್ಚದ ಖರ್ಚನ್ನು ಸಂಬಂಧಿಸಿದ ಇಲಾಖೆ ಭರಿಸಬೇಕಾಗಿರುವುದರಿಂದ ಅಪಾರ ಪ್ರಮಾಣದಲ್ಲಿ ವೆಚ್ಚವಾಗುತ್ತಿದೆ.

ಇದಕ್ಕೆ ಸಂಬಂದ ಪಟ್ಟಂತೆ ಸರ್ಕಾರಿ ವಾಹನ ಚಾಲಕರೊಬ್ಬನ್ನು ಮಾತನಾಡಿಸಿದಾಗ ಅಧಿಕಾರಿಗಳು ಹೇಳಿದಂತೆ ನಾವು ಕೇಳಬೇಕು ಇಲ್ಲದಿದ್ದರೆ ನಮ್ಮ ಪರಿಸ್ಥಿತಿ ನಿಮಗೆ ಗೊತ್ತಲ್ಲಾ ಅಂತಾರೆ.

ಜಿಲ್ಲಾ ಮಟ್ಟದ ಎಷ್ಟೋ ಅಧಿಕಾರಿಗಳು ದಿನನಿತ್ಯ ಮೈಸೂರಿನಿಂದ ಚಾಮರಾಜನಗರಕ್ಕೆ,ಚಾಮರಾಜನಗರದಿಂದ ಮೈಸೂರಿಗೆ ಪ್ರಯಾಣಿಸುತ್ತಿದ್ದಾರೆ.

ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಅನೇಕ ವಸತಿ ಗೃಹಗಳು ಜಿಲ್ಲಾ ಮಟ್ಟದ ಅದಿಕಾರಿಗಳಿಗಾಗಿಯೆ ಮೀಸಲಿವೆ.

ಆದರೆ ಸರ್ಕಾರಿ ವಾಹನಗಳನ್ನ ದುರ್ಬಳಕೆ ಮಾಡಿಕೊಳ್ಳುತ್ತಿರುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.

ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರು ಕೆಲವು ಸಮಯದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿ ಇರಬೇಕೆಂದು ಸೂಚಿಸಿದ್ದರೂ, ಇಲ್ಲಿ ಇಂತಹ ಆದೇಶಗಳಿಗೆ ಬೆಲೆ ಇಲ್ಲದಂತಾಗಿದೆ.

ಅಷ್ಟೇ ಅಲ್ಲ ಪ್ರಾರಂಭದಲ್ಲಿ ಅಧಿಕಾರ ವಹಿಸಿಕೊಂಡ ಜಿಲ್ಲಾಧಿಕಾರಿಗಳು ಇದೇ ಸೂಚನೆ ನೀಡಿದ್ದರೂ,ಇಲ್ಲಿ ಇಂತಹ ಅದೇಶಗಳಿಗೆ ಕಿಮ್ಮತ್ತಿಲ್ಲ.

ಹೆಸರಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನಿಲಯ ನಿಗದಿಯಾಗಿದ್ದರೂ ಅವರಿವರ ಸಂಬಂಧಿಕರು ಇಲ್ಲಿ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ‌.

ಒಟ್ಟಾರೆ ಸರ್ಕಾರಿ ವಾಹನಗಳು ಖಾಸಗೀ ವಾಹನಗಳಂತೆ ಬಳಕೆಯಾಗುತ್ತಿವೆ.

ಇದಕ್ಕೆ ಕಡಿವಾಣ ಹಾಕಬೇಕಾದ ಜಿಲ್ಲಾಡಳಿತ ಕ್ರಮ ವಹಿಸುವುದೇ ಎಂಬುದನ್ನ  ನೋಡಬೇಕಾಗಿದೆ.

ಪೊಲೀಸ್ ಇಲಾಖೆಯೂ ಹೊರತಲ್ಲ. ಇಲಾಖಾ ವಾಹನ ಹಾಗೂ ನಿರ್ಭಯ ಪಡೆಗೆ ಮೀಸಲಾಗಿರುವ ಅದೆಷ್ಟೊ ವಾಹನಗಳು ಶಾಲಾ ಮಕ್ಕಳನ್ನ ಕರೆತರಲು, ಊರಿಗೆ ಸುತ್ತಾಡಲು ಬಳಕೆಯಾಗುತ್ತಿವೆ.ಬೇಲಿಯೇ ಎದ್ದು ಹೊಲ ಮೈಯ್ದಂತಾಗಿದೆ ಇಲ್ಲಿನ ಪರಿಸ್ಥಿತಿ.