ಮೈಸೂರು: ವಿಧಾನ ಸಭಾ ಕ್ಷೇತ್ರಗಳಿಗೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಮೈಸೂರು ನಗರ ಪೊಲೀಸರು ರೌಡಿಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದರು.
ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಅವರ ಆದೇಶದಂತೆ ನಗರ ಪೊಲೀಸರು ಮಂಗಳವಾರ ಬೆಳಗಿನ ಜಾವ ಸುಮಾರು 40ಕ್ಕೂ ಅಧಿಕ ರೌಡಿಗಳ ನಿವಾಸದ ಮೇಲೆ ದಾಳಿ ನಡೆಸಿದರು.
ಯಾವುದೇ ಅಹಿತಕರ ಘಟನೆ ನಡೆಸದಂತೆ ಅಪರಾಧ ಕೃತ್ಯದಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರಿಕೆ ನೀಡಿದರು.
ಅನುಮಾನಾಸ್ಪದವಾಗಿ ಕಂಡು ಬಂದ ರೌಡಿ ಗಳನ್ನು ಹೆಬ್ಬಾಳ ಠಾಣೆಗೆ ಕರೆತಂದು ಪರೇಡ್ ನಡೆಸಿ ಕಾನೂನು ಕ್ರಮ ಕೈಗೊಂಡರು.
ಹಲವಾರು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿ ಹೊರ ಬಂದಿದ್ದೀರಿ. ಇನ್ನಾದರೂ ಸಮಾಜಘಾತುಕ ಕೃತ್ಯದಲ್ಲಿ ತೊಡಗದೆ ಜೀವನವನ್ನು ಒಳ್ಳೆಯ ರೀತಿಯಲ್ಲಿ ಸಾಗಿಸಿ ಎಂದು ಬುದ್ದಿ ವಾದ ಹೇಳಿದರು.
ಮತ್ತೆ ಅಪರಾಧ ಪ್ರಕರಣದಲ್ಲಿ ತೊಡಗಿರುವುದು ಕಂಡು ಬಂದದ್ದೇ ಆದರೆ ಕೇಸು ದಾಖಲಿಸಿ ರೌಡಿ ಶೀಟ್ ಪ್ರಕರಣದಡಿ ಗಡಿಪಾರು ಮಾಡಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದರು.
ಡಿಸಿಪಿಗಳಾದ ಎಂ.ಮುತ್ತುರಾಜ್, ಎಸ್.ಜಾಹ್ನವಿ, ಎಸಿಪಿ ಗಜೇಂದ್ರ, ಶಾಂತಮಲ್ಲಪ್ಪ, ನಗರದ ವಿವಿಧ ಠಾಣೆಯ ಇನ್ಸ್ಪೆಕ್ಟರ್ ಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.