ಶಿವಮೊಗ್ಗ ಏರ್ ಪೋರ್ಟ್ 2 ವರ್ಷದಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ -ಸಿಎಂ

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಏರ್ ಪೋರ್ಟ್ ಇನ್ನೆರಡು ವರ್ಷಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸೋಮವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಸಮಾರಂಭದಲ್ಲಿ ಸಿಎಂ ಮಾತನಾಡಿದರು.

2014ರ ನಂತರ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ದೇಶದಲ್ಲಿ ವಿಮಾನ ನಿಲ್ದಾಣಗಳು, ಆಸ್ಪತ್ರೆಗಳು, ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಿವೆ‌ ಎಂದು ಹೇಳಿದರು.

ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬಡವರಿಗಾಗಿ ಮನೆ ನಿರ್ಮಾಣ, ಶೌಚಾಲಯ ಹೀಗೆ ಮೂಲಭೂತ ಸೌಕರ್ಯಗಳಲ್ಲಿ ಕಳೆದ ಏಳೆಂಟು ವರ್ಷಗಳಲ್ಲಿ ಸಾಕಷ್ಟು ಪ್ರಗತಿ ಮಾಡಲಾಗಿದೆ ಎಂದು ತಿಳಿಸಿದರು.

ಈಗ ಭಾರತ ಆರ್ಥಿಕವಾಗಿ ಸಬಲವಾಗಿದ್ದು, ಇಡೀ ಪ್ರಪಂಚ ನಮ್ಮತ್ತ ನೋಡುತ್ತಿದೆ. ಜಿ20 ಅಧ್ಯಕ್ಷ ಸ್ಥಾನ ಭಾರತಕ್ಕೆ ಸಿಕ್ಕಿರುವುದು ಇದಕ್ಕೆ ಸಾಕ್ಷಿ ಎಂದರು.

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಕೇವಲ ಸಂಚಾರ ಮಾತ್ರ ಅಲ್ಲಾ ಯುವಜನತೆಗೆ ಉದ್ಯೋಗ, ಆರ್ಥಿಕತೆಗೆ ಹೊಸ ಅವಕಾಶಗಳನ್ನು ತೆರೆಯಲಿದೆ ಬೊಮ್ಮಾಯಿ ತಿಳಿಸಿದರು.

ಯಡಿಯೂರಪ್ಪನವರು ಹುಟ್ಟಾ ಹೋರಾಟಗಾರರು, ಅವರು ಶಿಕಾರಿಪುರದಿಂದ ಏಳು ಬಾರಿ ಆಯ್ಕೆಯಾಗಿ, ರೈತರಿಗಾಗಿ, ನೀರಾವರಿ, ಬಗರ್ ಹುಕುಂಗೆ ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಸೂರ್ಯ-ಚಂದ್ರರು ಇರುವವರೆಗೂ ಕರ್ನಾಟಕದ ಇತಿಹಾಸದಲ್ಲಿ ಯಡಿಯೂರಪ್ಪನವರ ಹೆಸರು ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳಿದರು.