ಶ್ರೀರಂಗಪಟ್ಟಣ: ದಕ್ಷಿಣ ಗಂಗೆ ಕಾವೇರಿ ನದಿ ಕೊಡಗು ಮೈಸೂರು: ಮಂಡ್ಯ ಜಿಲ್ಲೆಯ ರೈತರ ಜೀವನಾಡಿ, ಬೆಂಗಳೂರು ಮಹಾನಗರ ಜನರ ಕುಡಿಯುವ ನೀರಿನ ಮೂಲಾಧಾರ, ಪಾವನ ಗಂಗೆ ಕಾವೇರಿ ನದಿ ಈಗ ಅಶುದ್ಧವಾಗಿದ್ದಾಳೆ.
ದಕ್ಷಿಣ ಕರ್ನಾಟಕದ ಕೊಡಗು, ಮೈಸೂರು. ಚಾಮರಾಜನಗರ, ಮಂಡ್ಯ, ಬೆಂಗಳೂರು, ರಾಮನಗರ ಸೇರಿದಂತೆ ಶೇ.50ರಿಂದ 60 ರಷ್ಟು ಜನ ಈ ನದಿಯನ್ನು ವ್ಯವಸಾಯಕ್ಕೆ ಹಾಗೂ ಕುಡಿಯುವ ನೀರಿಗಾಗಿ ಅವಲಂಬಿಸಿದ್ದಾರೆ.
ಇಂತಹ ನೈಸರ್ಗಿಕ ಪರಿಶುದ್ಧ ಕಾವೇರಿ ನದಿಯ ಒಡಲಿಗೆ ಪಟ್ಟಣದ ಹೊರ ಹಾಗೂ ಒಳಭಾಗದಲ್ಲಿ ಕಲುಷಿತ ಕೊಳಚೆ ನೀರು ನೇರವಾಗಿ ಸೇರುತ್ತಿದೆ.
ಶ್ರೀರಂಗಪಟ್ಟಣದ ವಾಟರ್ ಗೇಟ್ ಬಳಿ ಇಂದಿಗೂ ನಿತ್ಯ ಲಕ್ಷಾಂತರ ಲೀಟರ್ ಮಲ ಮೂತ್ರ ಮಿಶ್ರಿತ ನೀರು ನೇರ ಕಾವೇರಿ ಒಡಲಿಗೆ ಸೇರುತ್ತಿದೆ.
ಇದಕ್ಕೆ ಪೂರಕವಾಗಿ ಕೋಟೆ ಗಣಪತಿಯ ವೆಲ್ಲೆಸ್ಲಿ ಸೇತುವೆ ಬಳಿ ಹಾಗೂ ಗಂಜಾಂನ ನಿಮಿಷಾಂಬ ದೇಗುಲದ ಹಿಂಭಾಗ ವಸತಿ ಪ್ರದೇಶಗಳ ಕೊಳಚೆ ನೀರು ಸೇರುತಿದೆ.
ಇದರಿಂದ ನಿಮಿಷಾಂಬ ದೇಗುಲದ ಭಕ್ತರ ಪವಿತ್ರ ಸ್ನಾನಕ್ಕೂ ಕುತ್ತು ತಂದಿದೆ. ಚರ್ಮ ಕಾಯಿಲೆಗಳಿಗೆ ಆಹ್ವಾನ ನೀಡುತ್ತಿದೆ. ಇದೇ ನೀರನ್ನು ಮೇಳಾಪರ ಸಮೀಪ ಮೈಸೂರು ನಗರಕ್ಕೆ ನಾಲ್ಕನೇ ಹಂತದ ಕುಡಿಯುವ ನೀರಿನ ಯೋಜನೆಗಾಗಿಯೂ ಬಳಸಲಾಗುತ್ತದೆ.
ಹಾಗಾಗಿ ಕೂಡಲೆ ನಮಾಮಿ ಗಂಗೆ ಮಾದರಿಯಲ್ಲಿ ಕಾವೇರಿ ನದಿಯನ್ನೂ ಶುದ್ದಿ ಮಾಡುವ ತುರ್ತು ಇದೆ.