ಬೊಮ್ಮಾಯಿ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

ಬೆಂಗಳೂರು: ಕೆಎಸ್‍ಡಿಎಲ್ ಟೆಂಡರ್ ಲಂಚ ಹಗರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು, ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಜತೆಗೆ ಮುಖ್ಯಮಂತ್ರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ನಾಯಕರನ್ನು ಪೊಲೀಸರು ತಡೆದು ಬಸ್ ನಲ್ಲಿ ತುಂಬಿ ಕರೆದೊಯ್ದರು.

ಪ್ರತಿಭಟನೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್‍ಸಿಂಗ್ ಸುರ್ಜೇವಾಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಮಾಜಿ ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಪ್ರಿಯಾಂಕ ಖರ್ಗೆ ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದರು.

ಸಿದ್ದರಾಮಯ್ಯ ಸೂಟ್‍ಕೇಸ್ ಹಿಡಿದು ಮೆರವಣಿಗೆ ನಡೆಸಿದರು. ಮಾಡಾಳ್ ವಿರುಪಾಕ್ಷಪ್ಪ ಅವರ ಮನೆಯಲ್ಲಿ ಸಿಕ್ಕ ಕಂತೆ ಕಂತೆ ಹಣವನ್ನು ತುಂಬಿದ್ದ ಬ್ಯಾಗ್‍ಗಳ ಹಾಗೂ ನೋಟುಗಳ ಅಣುಕು ಪ್ರದರ್ಶನ ನಡೆಸಲಾಯಿತು.

ಬಿಜೆಪಿಯದು ರೂಲ್‍ಕಾಲ್ ಮಾಡೇಲ್, ಜನ ವಿರೋಧಿ ಬಿಜೆಪಿ, ಶೇ.40ರಷ್ಟು ಕಮಿಷನ್ ಸರ್ಕಾರ ಎಂಬ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.

ಮೆರವಣಿಗೆಯುದ್ಧಕ್ಕೂ ಬಿಜೆಪಿ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ,ತಮ್ಮ ರಾಜಕೀಯ ಜೀವನನದಲ್ಲಿ ಇಂತಹ ಭ್ರಷ್ಟಸರ್ಕಾರವನ್ನು ನೋಡಿಯೇ ಇರಲಿಲ್ಲ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲರನ್ನೂ ಮೀರಿಸುವಷ್ಟು ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಯವರು ಸುಳ್ಳಿನ ಫ್ಯಾಕ್ಟರಿಯನ್ನೇ ಸ್ಥಾಪನೆ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಭ್ರಷ್ಟಚಾರಕ್ಕೆ ದಾಖಲೆ ಕೊಡಿ ಎಂದು ಮುಖ್ಯಮಂತ್ರಿ ಈವರೆಗೂ ಕೇಳುತ್ತಿದ್ದರು. ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಮಗ ಪ್ರಶಾಂತ್ ಮನೆ ಮೇಲೆ ಲೋಕಾಯುಕ್ತ ದಾಳಿ, ನಡೆಸಿರುವುದು ಎಂಟು ಕೋಟಿ ರೂಪಾಯಿಗೂ ಅಧಿಕ ಮೊತ್ತ ವಶ ಪಡಿಸಿಕೊಂಡಿರುವುದು, ಪ್ರಶಾಂತ್‍ನನ್ನು ಬಂಧಿಸಿರುವುದು ಸಾಕ್ಷಿ ಸಾಕಲ್ಲವೆ ಎಂದು ಹೇಳಿದರು.

ರಣದೀಪ್‍ಸಿಂಗ್ ಸುರ್ಜೇವಾಲ, ಬಿಜೆಪಿಯನ್ನು ಭ್ರಷ್ಟ ಬೋಮ್ಮಾಯಿ ಸರ್ಕಾರ ಎಂದು ಹೆಸರು ಬದಲಾವಣೆ ಮಾಡುವುದು ಸೂಕ್ತವಾಗಿದೆ. ಜನರಿಗೆ ಶೇ.40ರಷ್ಟು ಕಮಿಷನ್ ದಂಧೆ ಅರ್ಥವಾಗಿದೆ. 20 ರೂಪಾಯಿ ಸೋಪಿನಲ್ಲೂ ಬಿಜೆಪಿ ಸರ್ಕಾರ ಹಗರಣ ಮಾಡಿದೆ ಎಂದು ಆರೋಪಿಸಿದರು.