ಹೋಟೆಲ್‍ನಿಂದ ಆಡಳಿತ ನಡೆಸಿದ್ದ ಕುಮಾರಸ್ವಾಮಿಯಿಂದ ಪಾಠ ಕಲಿಯಬೇಕಾಗಿಲ್ಲ – ಆರ್.ಅಶೋಕ್

ಬೆಂಗಳೂರು: ಹಳೆ ಮೈಸೂರು ಭಾಗದಲ್ಲೂ ಈ ಬಾರಿ ಸತತ ಪ್ರಯತ್ನ ನಡೆಸಿ ಗೆಲುವು ಸಾಧಿಸುತ್ತೇವೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಬಿಜೆಪಿ ಸಂಕಲ್ಪ ಯಾತ್ರೆ ವೇಳೆಮ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಬೇರೆ ಪಕ್ಷಗಳ  ಮುಖಂಡರು ಬಿಜೆಪಿ ಸೇರಲು ಮಾತುಕತೆ ನಡೆಯುತ್ತಿದೆ.ಬಹಳಷ್ಟು ‌ಮಂದಿ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ತಂಡವು 67 ಕ್ಷೇತ್ರಗಳಲ್ಲಿ ಸಂಚರಿಸಲಿದೆ. ರಥಯಾತ್ರೆ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಶತಸ್ಸಿದ್ಧ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್‍ನ ಎ ಟೀಂ ಮತ್ತು ಬಿ ಟೀಮನ್ನು ಮನೆಗೆ ಕಳುಹಿಸಿ ಬಿಜೆಪಿಯನ್ನು ಜನರು ಗೆಲ್ಲಿಸಲಿದ್ದಾರೆ. ನರೇಂದ್ರ ಮೋದಿಜಿ ಅವರ ಅಭಿವೃದ್ಧಿ ಕಾರ್ಯಗಳು ಇದಕ್ಕೆ ಪೂರಕ ಎಂದರು.

ಮೂರು ರಾಜ್ಯಗಳ ಚುನಾವಣೆಯಲ್ಲಿ ಎರಡು ರಾಜ್ಯಗಳಲ್ಲಿ ಬಿಜೆಪಿ ಬಹುಮತ ಪಡೆದಿದೆ. ಇನ್ನೊಂದು ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಬರಲಿದೆ ಕರ್ನಾಟಕದಲ್ಲೂ ಜನರು ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉತ್ತರ ಪ್ರದೇಶದಲ್ಲೂ ರಥಯಾತ್ರೆ ಮೂಲಕ ಗೆಲುವು ಸಾಧಿಸಿದ್ದೇವೆ. ಕಾಂಗ್ರೆಸ್- ಜೆಡಿಎಸ್ ಯಾತ್ರೆಗಳು ಅಂತ್ಯಗೊಂಡಿವೆ. ನಮ್ಮ 4 ತಂಡಗಳ ರಥಯಾತ್ರೆ ನಡೆದಿದೆ ಎಂದರು.

ವಿಧಾನಸೌಧದ ಬದಲಾಗಿ ಹೋಟೆಲ್‍ನಿಂದ ಆಡಳಿತ ನಡೆಸಿದ್ದ ಕುಮಾರಸ್ವಾಮಿ ಅವರಿಂದ ನಾವೇನೂ ಪಾಠ ಕಲಿಯಬೇಕಾಗಿಲ್ಲ.

ಸಿದ್ದರಾಮಯ್ಯ- ಕುಮಾರಸ್ವಾಮಿ ಆಡಳಿತದಲ್ಲಿದ್ದಾಗ ಸಿಎಂ, ಶಾಸಕರ ಮೇಲೆ 70ಕ್ಕೂ ಹೆಚ್ಚು ಪ್ರಕರಣಗಳಿದ್ದವು. ಲೋಕಾಯುಕ್ತವನ್ನೇ ಮುಚ್ಚಿ ಪ್ರಕರಣದ ತನಿಖೆ ಮಾಡದಂತೆ ನೋಡಿಕೊಂಡರು ಎಂದು ಟೀಕಾಪ್ರಹಾರ ನಡೆಸಿದರು ಅಶೋಕ್.

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಚಿವ ಡಾ. ಅಶ್ವತ್ಥನಾರಾಯಣ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮತ್ತಿತರರು ಯಾತ್ರೆಯಲ್ಲಿ ಪಾಲ್ಗೊಂಡಿಪದ್ದರು.