ಮೋದಿ ನೇತೃತ್ವದ ಬಿಜೆಪಿಗೆ ನನ್ನ ಬೆಂಬಲ -ಸುಮಲತಾ

ಮಂಡ್ಯ: ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಸಂಸದೆ ಸುಮಲತಾ ಅಂಬರೀಶ್ ಶುಕ್ರವಾರ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಮಂಡ್ಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ನಾಲ್ಕು ವರ್ಷಗಳಿಂದ ಚಿಂತಿಸಿ ನಾನು ಈ ನಿರ್ಧಾರವನ್ನು ಕೈಗೊಂಡಿದ್ದೇನೆ ಎಂದು ತಿಳಿಸಿದರು.

ಮಂಡ್ಯದ ಅಭಿವೃದ್ಧಿಗಾಗಿ  ಒಬ್ಬ ಸಮರ್ಥ ನಾಯಕರ ಅಗತ್ಯ ಬೇಕಿದೆ. ಅದನ್ನು ಪ್ರಧಾನಿ ನರೇಂದ್ರ ಮೋದಿಯವರು ನೀಡಲಿದ್ದಾರೆ ಎಂಬುದು ನನ್ನ ನಂಬಿಕೆ.

ಹಾಗಾಗಿ ನಾನು ಸಾಕಷ್ಟು ಚಿಂತನೆ ಮಾಡಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದೇನೆ ಸ್ಪಷ್ಟಪಡಿಸಿದರು.

ಪ್ರಶ್ನೆಯೊದಕ್ಕೆ ಉತ್ತರಿಸಿದ ಸುಮಲತಾ ಬಿಜೆಪಿಯನ್ನು ನಾನು ಈಗ ಸೇರ್ಪಡೆ ಆಗುವುದಿಲ್ಲ, ಕಾರಣ ಪಕ್ಷೇತರ ಅಭ್ಯರ್ಥಿ ಪಕ್ಷವೊಂದನ್ನು ಸೇರಬೇಕಾದರೆ ಆಯ್ಕೆಯಾದ ಆರು ತಿಂಗಳೊಳಗೆ ಸೇರಬೇಕಾಗಿತ್ತು.

ಆದರೆ ಈಗ ನಾಲ್ಕು ವರ್ಷಗಳು ಮುಗಿದಿರುವುದರಿಂದ ಕಾನೂನಾತ್ಮಕವಾಗಿ ಬಿಜೆಪಿ ಸೇರಲು ಸಾಧ್ಯವಾಗುವುದಿಲ್ಲ ಹಾಗಾಗಿ ನಾನು ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ತಿಳಿಸಿದರು.

ಮಂಡ್ಯದಲ್ಲಿ ಕಲುಷಿತ ರಾಜಕಾರಣ ಇದೆ ಇದನ್ನು ಸ್ವಚ್ಛಗೊಳಿಸೋಣ ಎಲ್ಲರೂ ನಮ್ಮೊಂದಿಗೆ ಬನ್ನಿ ಎಂದು ಅಲ್ಲಿನ ಜನತೆಗೆ ಕರೆ ನೀಡಿದರು.

ಸ್ವಚ್ಛ ಮಂಡ್ಯ ಅಭಿಯಾನ ಹಮ್ಮಿಕೊಳ್ಳಲು ಇದು ಸುಸಂದರ್ಭವಾಗಿದೆ ಎಂದು ಹೇಳಿದರು

ನಾನು ಕುಟುಂಬ ರಾಜಕಾರಣ ಮಾಡುವುದಿಲ್ಲ ನಾನು ಒಂದು ಪಕ್ಷದಲ್ಲಿ ಇರುವವರೆಗೂ ನನ್ನ ಮಗ ಅಭಿಷೇಕ್ ರಾಜಕೀಯಕ್ಕೆ ಬರುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು ಸುಮಲತಾ.

ಇದೇ ಸಂದರ್ಭದಲ್ಲಿ ದಲಪತಿಗೆ ಸವಾಲು ಹಾಕಿದ ಸುಮಲತಾ, ಮಂಡ್ಯ ಭದ್ರಕೋಟೆ ಎನ್ನುತ್ತೀರಲ್ಲ. ಈ ಭದ್ರಕೋಟೆಗಾಗಿ ಏನು ಮಾಡಿದ್ದೀರಾ ಎಂದು ಪ್ರಶ್ನಿಸಿದರು.