ಚಾಮರಾಜನಗರ :ಸರಳ ಸಜ್ಜನೀಯ ವ್ಯಕ್ತಿ, ಅಜಾತಶತ್ರು ಎಂದೆ ಬಿಂಬಿತರಾಗಿದ್ದ ಆರ್. ಧ್ರುವನಾರಾಯಣ ಅವರ ಅಂತ್ಯಕ್ರಿಯೆ ಭಾನುವಾರ ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದ ತೋಟದಲ್ಲಿ ನಡೆಯುತು.
ಧ್ರುವನಾರಾಯಣ ಅವರ ತಂದೆ-ತಾಯಿ ಸಮಾಧಿ ಪಕ್ಕವೇ ಧ್ರುವನಾರಾಯಣ ಅವರ ಅಂತ್ಯಕ್ರಿಯೆ ನಡೆಯಿತು. ಹಿಂದೂ ಧಾರ್ಮಿಕ ವಿಧಿ ವಿಧಾನದಂತೆ ಮೆರವಣಿಗೆ ನಡೆಸಿ ಬಳಿಕ ಮಣ್ಣು ಮಾಡಲಾಯಿತು.
ಪತ್ನಿ ವೀಣಾ ಮಕ್ಕಳಾದ ದರ್ಶನ್, ಧೀರನ್ ಶೋಕ ಸಾಗರದಲ್ಲಿ ಮುಳುಗಿದ್ದರು. ದುಃಖ ಹೊತ್ತ ಸಾವಿರಾರು ಕಣ್ಣುಗಳು ಕಂಬನಿ ಹಾಕುತ್ತ ರಾಜಕೀಯ ಧ್ರುವತಾರೆಯನ್ನು ಭಾರವಾದ ಮನಸ್ಸಿನಿಂದಲೇ ಕಳುಹಿಸಿಕೊಟ್ಟರು.
ಶನಿವಾರ ತಡರಾತ್ರಿ ಚಾಮರಾಜನಗರಕ್ಕೆ ಫಾರ್ಥಿವ ಶರೀರ ತರಲಾಗಿತ್ತು. ಜಿಲ್ಲಾ ಕೇಂದ್ರದಲ್ಲಿ ಮೆರವಣಿಗೆ ನಡೆಸಿದ ಬಳಿಕ ಹುಟ್ಟೂರಿಗೆ ಪಾರ್ಥೀವ ಶರೀರವನ್ನು ತಂದು ಡಾ.ಬಿ.ಆರ್.ಅಂಬೇಡ್ಕರ್ ಭವನ ಸಮೀಪ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ನೆಚ್ಚಿನ ಜನನಾಯಕನಿಗೆ ಅಂತಿಮ ನಮನ ಸಲ್ಲಿಸಲು ಹಳ್ಳಿ ಗಳಿಂದ ಜನರು ಆಟೋ, ಜೀಪ್, ಟ್ರಕ್, ಟ್ಯಾಕ್ಟರ್ ಹೀಗೆ ಅನೇಕ ವಾಹನಗಳನ್ನು ಮಾಡಿಕೊಂಡು ತಂಡೊಪತಂಡವಾಗಿ ಬಂದು ಅಂತಿಮ ನಮನ ಸಲ್ಲಿಸಿದರು.
ಚಾಮರಾಜನಗರ ಜಿಲ್ಲಾಡಳಿತದ ವತಿಯಿಂದ ಮಾಜಿ ಸಂಸದ ಧ್ರುವನಾರಾಯಣ ಅವರಿಗೆ ಸರ್ಕಾರಿ ಗೌರವವನ್ನು ಸಲ್ಲಿಸಲಾಯಿತು. ಚಾಮರಾಜನಗರ ಪೊಲೀಸ್ ಇಲಾಖೆಯು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ನಮನ ಸಲ್ಲಿಸಿತು. ಜಿಲ್ಲಾಡಳಿತ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಶಾಸಕರುಗಳು ಪುಷ್ಪ ಮಾಲೆ ಅರ್ಪಿಸಿ ಅಂತಿಮ ಗೌರವ ಸಲ್ಲಿಸಿದರು.
ಅಂತಿಮ ನಮನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಾಲ್ಗೊಂಡಿದ್ದರು.
ಧ್ರುವನಾರಾಯಣ ಪುತ್ರ ದರ್ಶನ ಭುಜ ತಟ್ಟಿ ಸಮಾಧಾನ ಪಡಿಸಿದ ಸಿದ್ದರಾಮಯ್ಯ ಧೈರ್ಯ ತುಂಬಿದರು. ನಂತರ, ಡಿಕೆ ಶಿವಕುಮಾರ್ ಕಾಂಗ್ರೆಸ್ ಧ್ವಜವನ್ನು ಪಾರ್ಥೀವ ಶರೀರದ ಮೇಲೆ ಹೊದಿಸಿ ಬಿಕ್ಕಿ-ಬಿಕ್ಕಿ ಅತ್ತರು.
ಸಲೀಂ ಅಹ್ಮದ್, ಡಿ.ಕೆ.ಸುರೇಶ್, ದಿನೇಶ್ ಗುಂಡೂರಾವ್, ಕೆ.ಎಚ್.ಮುನಿಯಪ್ಪ, ಸತೀಶ್ ಜಾರಕಿಹೊಳಿ, ವಿಶ್ವನಾಥ್, ರೋಜಿ ಜಾನ್, ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಸಿ.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಪುತ್ರನಿಗೆ ಟಿಕೇಟ್: ಸಮಾಧಾನ ಪಡಿಸಿ ಹೈರಾಣಾದ ನಾಯಕರು : ಧ್ರುವನಾರಾಯಣ್’ ಅಂತ್ಯಕ್ರಿಯೆಗೂ ಮುನ್ನ ಅವರ ಪುತ್ರ ದರ್ಶನ್ ಗೆ ಟಿಕೆಟ್ ಘೋಷಿಸುವಂತೆ ಅಭಿಮಾನಿಗಳು ಆಗ್ರಹಿಸಿದರು.
ಮುಂದಿನ ಸಾಲಲ್ಲಿ ಕುಳಿತಿದ್ದ ಹಿರಿಯ ನಾಯಕರು ಎಷ್ಟೇ ಸಮಾಧಾನಪಡಿಸಿದರೂ ಕಾರ್ಯಕರ್ತರು ಸಮಾಧಾನವಾಗದೆ ಇದ್ದುದ್ದರಿಂದ ನಾಯಕರುಗಳು ಹೈರಾಣರಾದರು.
ಅಂತ್ಯಕ್ರಿಯೆ ಸ್ಥಳದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರನ್ನು ಆಗ್ರಹಿಸಿದ ಅಭಿಮಾನಿಗಳು ಪುತ್ರ ದರ್ಶನ್ ಗೆ ಈ ಬಾರಿ ನಂಜನಗೂಡು ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಪಟ್ಟು ಹಿಡಿದರು.