ಕನ್ನಡದಲ್ಲೇ ಸಿಗಲಿದೆ ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣ -ಮೋದಿ

ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳು ಸದ್ಯದಲ್ಲೇ ಕನ್ನಡ ಸೇರಿ ಎಲ್ಲಾ ಸ್ಥಳೀಯ ಭಾಷೆಗಳಲ್ಲೇ ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣ ಪಡೆಯಬಹುದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಚಿಕ್ಕಬಳ್ಳಾಪುರದ ಸತ್ಯಸಾಯಿ ಗ್ರಾಮದಲ್ಲಿ ನಿರ್ಮಿಸಿರುವ ಮಧುಸೂದನ ಸಾಯಿ ಖಾಸಗಿ ಮೆಡಿಕಲ್ ಕಾಲೇಜು ಲೋಕಾರ್ಪಣೆ ಮಾಡಿ ಮೋದಿ ಮಾತನಾಡಿದರು.

ಬಡವರನ್ನು ವೋಟ್ ಬ್ಯಾಂಕ್ ಎಂದು ಪರಿಗಣಸಿದ್ದ ದೇಶದ ಪರಿಸ್ಥಿತಿಯನ್ನು ಬಿಜೆಪಿ ಸರ್ಕಾರ ಬದಲಾಯಿಸಿದೆ. ಬಡವರ ಮಕ್ಕಳು ಕನ್ನಡದಲ್ಲಿ ವೈದ್ಯಕೀಯ ಓದುವಂತಹ ಸೌಲಭ್ಯಗಳನ್ನು ನಾವು ಕಲ್ಪಿಸಿದ್ದೇವೆ ಎಂದು ತಿಳಿಸಿದರು.

ಕನ್ನಡ ಮಾತ್ರವಲ್ಲದೆ ಪ್ರಾಂತೀಯ ಭಾಷೆಗಳಲ್ಲಿ ಇಂದು ವೈದ್ಯಕೀಯ ವಿಜ್ಞಾನ ಓದುವಂತಾಗಲು ಹೊಸ ವ್ಯವಸ್ಥೆಯನ್ನು ಸದ್ಯದಲ್ಲೇ ಎಲ್ಲಾ ಕಡೆ ತರಲಿದ್ದೇವೆ ಎಂದು ಹೇಳಿದರು.

ಚಿಕ್ಕಬಳ್ಳಾಪುರ ಸರ್. ಎಂ. ವಿಶ್ವೇಶ್ವರಯ್ಯ ಅವರ ಜನ್ಮಸ್ಥಳವಾಗಿದೆ, ಇಲ್ಲಿಗೆ ಬಂದಿರುವುದು ನನ್ನ ಪುಣ್ಯ ಎಂದು ಮೋದಿ ತಿಳಿಸಿದರು.

ಸತ್ಯಸಾಯಿ ಆಶ್ರಮದಿಂದ ಶೈಕ್ಷಣಿಕ, ಸಾಮಾಜಿಕ, ವೈದ್ಯಕೀಯ ಸೇವೆ ಮಾಡಲಾಗುತ್ತಿದೆ. 2014ಕ್ಕಿಂತ ಮೊದಲು 300ಕ್ಕಿಂತ ಕಡಿಮೆ ಮೆಡಿಕಲ್ ಕಾಲೇಜುಗಳಿದ್ದವು. ಇಂದು ದೇಶದಲ್ಲಿ 650ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳಿವೆ. ಕರ್ನಾಟಕದಲ್ಲೇ ಸುಮಾರು 70ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳು ಇವೆ ಎಂದು ‌ಹೇಳಿದರು.

ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕ ಅಭಿವೃದ್ಧಿ ಆಗುತ್ತಿದೆ. ಬಡವರ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ.

ಆಯುಷ್ಮಾನ ಭಾರತ್ ಯೋಜನೆಯಿಂದ ಬಡ ರೋಗಿಗಳಿಗೆ ಅನುಕೂಲವಾಗಿದೆ. ಕರ್ನಾಟಕದ ಲಕ್ಷಾಂತರ ರೋಗಿಗಳಿಗೆ ಯೋಜನೆಯಿಂದ ಅನುಕೂಲವಾಗಿದೆ ಎಂದು ‌ತಿಳಿಸಿದರು.

ಆರೋಗ್ಯದ ಜೊತೆಗೆ ಮಹಿಳೆಯರ ಕಲ್ಯಾಣ ನಮ್ಮ ಸರ್ಕಾರದ ಗುರಿ. ಗ್ರಾಮಗಳಲ್ಲಿ ಮಹಿಳಾ ಸಂಘಗಳ ಮೂಲಕ ಮಹಿಳೆಯರ ಸಶಕ್ತೀಕರಣವಾಗುತ್ತಿದೆ ಎಂದು ನರೇಂದ್ರ ಮೋದಿ ಹೇಳಿದರು.