ದಾವಣಗೆರೆ: ಕರ್ನಾಟಕದ ಒಂದು ವಿಡಿಯೋ ನೋಡುತ್ತಿದ್ದೆ, ಅದರಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿಯೊಬ್ಬರು ಅವರದ್ದೇ ಪಕ್ಷದ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದಾರೆ ಆದರೆ ನನ್ನ ಕಾರ್ಯಕರ್ತ ನನ್ನ ಮಿತ್ರ ನನ್ನ ಸಹೋದರ ಇದ್ದಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಹೀಗೆ ಕಾರ್ಯಕರ್ತನಿಗೆ ಸಿದ್ದರಾಮಯ್ಯ ಕಪಾಳ ಮೋಕ್ಷ ಪ್ರಕರಣವನ್ನು ಮೋದಿ ತಮ್ಮ ಭಾಷಣದ ನಡುವೆ ಪ್ರಸ್ತಾಪಿಸಿ,
ನಮ್ಮಲ್ಲಿ ದೊಡ್ಡ ಕಾರ್ಯಕರ್ತ, ಚಿಕ್ಕ ಕಾರ್ಯಕರ್ತ ಎಂದೆಲ್ಲ ಇಲ್ಲಾ ಎಲ್ಲರೂ ಸಮಾನರೇ ಎಂದು ತಿಳಿಸಿದರು.
ದಾವಣಗೆರೆಯಲ್ಲಿ ನಡೆದ ವಿಜಯಸಂಕಲ್ಪ ಯಾತ್ರೆಯ ಮಹಾಸಂಗಮ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ನಿಮ್ಮ ಸೇವೆ ಮಾಡಬೇಕೆಂದು ಬಯಸುತ್ತಿದ್ದೇನೆ. ಆದರೆ ಕಾಂಗ್ರೆಸ್ ನನ್ನ ಸಮಾಧಿ ಬಯಸುತ್ತಿದೆ. ಜನರು ಮೋದಿ ನಿನ್ನ ಕಮಲ ಅರಳುತ್ತದೆ ಅನ್ನುತ್ತಿದ್ದಾರೆ ಎಂದು ಹೇಳಿದರು.
ನಿಮ್ಮ ಸೇವೆ ಮಾಡಲು ಬಿಜೆಪಿ ಸರ್ಕಾರವನ್ನ ಗೆಲ್ಲಿಸಿ ಎಂದು ನರೇಂದ್ರ ಮೋದಿ ಮನವಿ ಮಾಡಿದರು.
ದಾವಣಗೆರೆಯಲ್ಲಿ 4 ವಿಜಯ ಸಂಕಲ್ಪಯಾತ್ರೆಗಳ ಮಹಾಸಂಗಮ ಯಶಸ್ವಿಯಾಗಿದೆ,ನಮ್ಮ ಕಾರ್ಯಕರ್ತರು ಎಲ್ಲ ಬೂತ್‌ಗಳಿಗೂ ತೆರಳಿ ಬಿಜೆಪಿ ಪರ ಪ್ರಚಾರ ಮಾಡಬೇಕು ಎಂದು ಕರೆ ನೀಡಿದರು.
ಕರ್ನಾಟಕದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಕೊಡಲಾಗಿದೆ. ಬಡವನ ಅಗತ್ಯತೆಗಳನ್ನೂ ಬಿಜೆಪಿ ಸರ್ಕಾರ ಪೂರೈಸುತ್ತದೆ. ಕಾಂಗ್ರೆಸ್, ಜೆಡಿಎಸ್ ಇದ್ದಾಗ ಕಿಸಾನ್ ಸಮ್ಮಾನ್ ಯೋಜನೆಗೆ ಕಮ್ಮಿ ರೈತ ಫಲಾನುಭವಿಗಳ ಹೆಸರನ್ನ ಕಳುಹಿಸಿದ್ದರು. ಆದರೆ ನಮ್ಮ ಡಬಲ್ ಇಂಜಿನ್ ಸರ್ಕಾರ ಬಂದ ಮೇಲೆ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದರು.