ಚಿಕ್ಕಬಳ್ಳಾಪುರ: ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಆಗಬೇಕು ಎಂಬ ಅಭಿಲಾಷೆ ನಮ್ಮ ಪ್ರಧಾನಿ ಮೋದಿಯವರದು ಅದಕ್ಕಾಗಿ ನಿಯಮ ಸರಳಿಕರಣಗೊಳಿಸಿದ್ದಾರೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಇದರಿಂದಾಗಿ ಹಿಂದುಳಿದ ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.
ಸೋಮವಾರ ಚಿಕ್ಕಬಳ್ಳಾಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ, ಚಿಕ್ಕಮಗಳೂರು ಮೆಡಿಕಲ್ ಕಾಲೇಜು ಅಭಿವೃದ್ಧಿ ಮಾಡಲಾಗಿದೆ. ರಾಮನಗರದಲ್ಲಿಯೂ ವೈದ್ಯಕೀಯ ಕಾಲೇಜು ಆರಂಭಿಸಲಾಗುವುದು ಎಂದು ತಿಳಿಸಿದರು.
ನಂದಿಬೆಟ್ಟಕ್ಕೆ ರೋಪ್ ವೇ ಆಗಬೇಕೆಂದು ದಿವಂಗತ ನಟ ಶಂಕರನಾಗ್ ಆಶಿಸಿದ್ದರು ಅದು ಈಗ ನನಸಾಗುತ್ತಿದೆ ಎಂದು ಹೇಳಿದರು.
ರೋಪ್ ವೇ ಮಾಡಿದರೆ ಪ್ರವಾಸೋದ್ಯಮಕ್ಕೆ ಸಾಕಷ್ಟು ಅನುಕುಲವಾಗುತ್ತದೆ. ಈ ಭಾಗದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ನಂದಿ ಬೆಟ್ಟದ ಪಕ್ಕದ ದೇವಸ್ಥಾನ ಅಭಿವೃದ್ಧಿ ಆಗುತ್ತದೆ. ಆದ್ದರಿಂದ ಇದೊಂದು ಪ್ರವಾಸಿ ಸರ್ಕಿಟ್ ಆಗಲು ಅನುಕೂಲವಾಗಲಿದೆ ಎಂದರು.
ನಮ್ಮ ಯೋಜನೆಗಳ ಬಗ್ಗೆ ಜನರಿಗೆ ವಿಶ್ವಾಸ ಮೂಡಿದೆ. ಇದರಿಂದ ನಮ್ಮಆತ್ಮವಿಶ್ವಾಸವೂ ಇಮ್ಮಡಿಯಾಗಿದೆ ಎಂದರು.
ಅಮಿತ್ ಶಾ ಅವರ ಸಭೆಯಲ್ಲಿ ಪ್ರಣಾಳಿಕೆಯ ಬಗ್ಗೆ ಚರ್ಚೆ ಮಾಡಿದ್ದೇವೆ. ಆರೋಗ್ಯ ಸಚಿವ ಸುಧಾಕರ್ ಅವರು ಪ್ರಾಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದಾರೆ. ಈ ಬಾರಿ ನಮ್ಮದು ಜನತಾ ಪ್ರಣಾಳಿಕೆಯಾಗಲಿದೆ ಎಂದು ತಿಳಿಸಿದರು.
ಮೀಸಲಾತಿ ಹೆಚ್ಚಳ ಮಾಡಿರುವುದು ಕಾಂಗ್ರೆಸ್ ನವರಿಗೆ ಸಹಿಸಲಿಕ್ಕೆ ಆಗುತ್ತಿಲ್ಲ. ಹೀಗಾಗಿ ಅವರು ವಿರೋಧ ಮಾಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಬೊಮ್ಮಾಯಿ ಉತ್ತರಿಸಿದರು.