ಚಿಕ್ಕಬಳ್ಳಾಪುರ: ಬಿಜೆಪಿಯು ಜನರಿಗೆ ಯಾವುದೇ ಟೊಳ್ಳು ಭರವಸೆಗಳನ್ನು ನೀಡಿಲ್ಲ. ಆದರೆ ಭರವಸೆಯಲ್ಲಿ ಇಲ್ಲದ ಹೊಸ ಯೋಜನೆಗಳನ್ನು ಕೂಡ ನೀಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರದ ಅರೂರು ಗ್ರಾಮದಲ್ಲಿ ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಭವ್ಯ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದಿಂದ ನಂದಿ ಮೆಡಿಕಲ್ ಕಾಲೇಜು ಸೇರಿದಂತೆ ಅನೇಕ ಅಭಿವೃದ್ಧಿಗಳು ನಡೆಯುತ್ತಿವೆ ಎಂದು ಡಾ.ಕೆ ಸುಧಾಕರ್ ತಿಳಿಸಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇರುವುದರಿಂದ ಹೆಚ್ಚು ಅನುದಾನ ಬಂದು ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಿದೆ. ಡಬಲ್ ಎಂಜಿನ್ ಸರ್ಕಾರದಿಂದ ರಾಜ್ಯಕ್ಕೆ ದೊಡ್ಡ ಅಭಿವೃದ್ಧಿಯ ಸ್ಪರ್ಶ ದೊರೆತಿದೆ ಎಂದರು.
ರೈತರ ಮಕ್ಕಳು ಸೇರಿದಂತೆ 11 ಲಕ್ಷ ಮಕ್ಕಳಿಗೆ ಕಾಮನ್ ಮ್ಯಾನ್ ಸಿಎಂ ಬಸವರಾಜ ಬೊಮ್ಮಾಯಿಯವರು ವಿದ್ಯಾನಿಧಿ ನೀಡಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಶೌಚಾಲಯದ ಬಗ್ಗೆ ಮಾತನಾಡಿದಾಗ ಏನು ಮಹಾ ಎಂದು ಹಲವರು ಟೀಕಿಸಿದ್ದರು. ಆದರೆ 11 ಕೋಟಿ ಶೌಚಾಲಯಗಳನ್ನು ನಿರ್ಮಿಸಿ ಮಹಿಳೆಯರ ಘನತೆ ಎತ್ತಿ ಹಿಡಿಯಲಾಗಿದೆ. ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಿ ಅವರ ಕಷ್ಟವನ್ನು ತಪ್ಪಿಸಲಾಗಿದೆ ಎಂದು ಹೇಳಿದರು.
ನಂದಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಶೇ.60ರಷ್ಟು ಕೇಂದ್ರ, ಶೇ.40ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ನೀಡಿದೆ. 57 ಎಕರೆ ಪ್ರದೇಶದಲ್ಲಿರುವ ಈ ಕಾಲೇಜಿನಲ್ಲಿ ಸುಸಜ್ಜಿತ ಅಕಾಡೆಮಿಕ್ ಬ್ಲಾಕ್, ಹಾಸ್ಟೆಲ್ ಮೊದಲಾದ ಸೌಲಭ್ಯಗಳಿವೆ. ಚಿಕ್ಕಬಳ್ಳಾಪುರದಲ್ಲಿ ಸತ್ಯ ಸಾಯಿ ಮೆಡಿಕಲ್ ಕಾಲೇಜು ಕೂಡ ಆರಂಭವಾಗಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಈ ಕಾಲೇಜು ನಿರ್ಮಾಣಕ್ಕೆ ಸಹಕಾರ ನೀಡಿದ್ದರು. ಅವರಿಗೆ ಧನ್ಯವಾದಗಳು ಎಂದು ಡಾ. ಸುಧಾಕರ್ ಹೇಳಿದರು.
ಪ್ರತಿ ಕನ್ನಡಿಗರ ದೃಷ್ಟಿ ಸಮಸ್ಯೆ ಬಗೆಹರಿಸಲು ಉಚಿತ ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕ ವಿತರಣೆ ಮಾಡುವ 360 ಕೋಟಿ ರೂ. ಮೊತ್ತದ ‘ದೃಷ್ಟಿ ಯೋಜನೆ’ ನೀಡಲಾಗಿದೆ. ಈ ಸರ್ಕಾರ ಪ್ರಜೆಗಳ ಸರ್ಕಾರ. ಯಾವುದೇ ಟೊಳ್ಳು ಭರವಸೆಗಳನ್ನು ಬಿಜೆಪಿ ನೀಡಿಲ್ಲ. ಭರವಸೆಯಲ್ಲಿ ಇಲ್ಲದ ಹೊಸ ಯೋಜನೆಗಳನ್ನು ಕೂಡ ನೀಡಲಾಗಿದೆ ಎಂದವರು ತಿಳಿಸಿದರು.