ಮೇ 10ರಂದು‌ ಕರ್ನಾಟಕ ವಿಧಾನಸಭಾ ಚುನಾವಣೆ

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆ ಮೇ 10 ರಂದು ನಡೆಯಲಿದೆ.

ದೆಹಲಿಯ ವಿಜ್ಞಾನ ಭವನದಲ್ಲಿ ಬುಧವಾರ ಸುದ್ದಿ ಗೋಷ್ಠಿಯಲ್ಲಿ  ಮಾತನಾಡಿದ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್, ಮೇ 10ರಂದು ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.

ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು,ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ತಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಹೇಳಿದರು.

ಏ.13ರಿಂದ ವಿಧಾನಸಭೆ ಚುನಾವಣೆಗೆ ಅಸೂಚನೆ ಹೊರಡಲಿದ್ದು, ನಾಮಪತ್ರ ಸಲ್ಲಿಕೆಗೆ ಏ.20 ಕೊನೆಯ ದಿನವಾಗಿದೆ. ಏ.21ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏ.24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ ಎಂದವರು ತಿಳಿಸಿದರು.

ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದ ಮತ ಚಲಾಯಿಸುವ ಅವಕಾಶ ನೀಡಲಾಗುತ್ತಿದೆ. ಸಾಕಷ್ಟು ಚಾಲೆಂಜ್ ಗಳಿವೆ, ಅವುಗಳನ್ನು ಸುಧಾರಿಸಲಾಗಿದೆ, ಬುಡಕಟ್ಟು ಸಮುದಾಯ ಮತದಾನಕ್ಕೂ ವ್ಯವಸ್ಥೆ ಮಾಡಲಾಗಿದೆ.

ಇತ್ತೀಚೆಗೆ ಈಶಾನ್ಯ ರಾಜ್ಯದ ಚುನಾವಣೆಗಳನ್ನು ಯಶಸ್ವಿಯಾಗಿ ಮುಗಿಸಿದ್ದೇವೆ. ಸದ್ಯ ಕರ್ನಾಟಕ ಚುನಾವಣೆಗೆ ಎಲ್ಲಾ ಸಿದ್ಧತೆಗಳು ನಡೆದಿವೆ. ಕರ್ನಾಟಕದಲ್ಲಿ 5,21,73579 ಒಟ್ಟು ಮತದಾರರಿದ್ದು, 2, 62,42, 561 ಪುರುಷರು, 2,59,26,319 ಮಹಿಳೆಯರು, 4,699 ತೃತೀಯ ಲಿಂಗಿ ಹಾಗೂ 5.55 ಲಕ್ಷ ದಿವ್ಯಾಂಗ ಮತದಾರರಿದ್ದಾರೆ. 9.17.241 ಮಂದಿ ಮೊದಲ ಸಲ ಮತದಾನ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ತೃತೀಯ ಲಿಂಗಿಗಳು ಮತದಾರರ ಪಟ್ಟಿಗೆ ಸೇರ್ಪಡೆಗೆ ಹಿಂದೇಟು ಹಾಕುತ್ತಾರೆ. ಅವರಿಗೆ ನೋಂದಣಿ ಮಾಡಿಕೊಳ್ಳಲು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

58,282 ಒಟ್ಟು ಮತಗಟ್ಟೆಗಳ ಸ್ಥಾಪನೆ ಮಾಡಲಾಗುತ್ತಿದೆ. ಒಂದೊಂದು ಮತಗಟ್ಟೆಗೆ 883 ಮಂದಿ ಮತದಾರರಿಗೆ ಅವಕಾಶ ಮಾಡಿಕೊಡಲಾಗುತ್ತದೆ.

ನಗರ ಪ್ರದೇಶದಲ್ಲಿ 24,063, ಗ್ರಾಮೀಣ ಭಾಗದಲ್ಲಿ 34,219 ಹಾಗೂ 1320 ಮಹಿಳಾ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಯುವಕರಿಗಾಗಿ 224 ಮತಗಟ್ಟೆಗಳ ಸ್ಥಾಪನೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಇತರೆ ಮಹಾನಗರಗಳಿಗೆ ಹೋಲಿಸಿದರೆ  ಕಳೆದ ಬಾರಿ ಬೆಂಗಳೂರಿನಲ್ಲಿ ಕಡಿಮೆ ಮತದಾನವಾಗಿದೆ. ಹೀಗಾಗಿ ಈ ಬಾರಿ ಮತದಾನ ಹೆಚ್ಚಿಸಲು ಜಾಗೃತಿ ಮೂಡಿಸಲಾಗುತ್ತಿದೆ. ಬಹಳಷ್ಟು ಐಟಿ ಕಂಪನಿಗಳು ಇದಕ್ಕೆ ಸಹಕಾರ ನೀಡುತ್ತಿವೆ ಎಂದು ರಾಜೀವ್ ಕುಮಾರ್ ವಿವರಿಸಿದರು.

ಅಭ್ಯರ್ಥಿಗಳ ಮಾಹಿತಿ, ಪ್ರಮಾಣ ಪತ್ರ ಚುನಾವಣಾ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ. ಈ ಮೂಲಕ ಜನರು ತಮ್ಮ ಅಭ್ಯರ್ಥಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.

ಅಫಿಡೆವಿಟ್ APPನಲ್ಲಿ ಅಪ್ಲೋಡ್ ಮಾಡಲಾಗುವುದು. ಆ್ಯಪ್ ಸಹಾಯದಿಂದ ಚುನಾವಣಾ ಅಕ್ರಮಗಳ ಬಗ್ಗೆ ಜನರು ದೂರು ನೀಡಬಹುದು. ಈ ಹಿಂದೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ 1028 ಕೋಟಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಕರ್ನಾಟಕದಲ್ಲಿ ಅಕ್ರಮ ತಡೆಯಲು 2400 ತಂಡಗಳನ್ನು ರಚಿಸಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಪರಿಶೀಲನೆಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.

ರಾಜೀವ್ ಕುಮಾರ್ ಜೊತೆಗೆ ಚುನಾವಣಾ ಆಯುಕ್ತರಾದ ಅರುಣ್ ಗೋಯಲ್, ಅನುಪ್ ಚಂದ್ರ ಪಾಂಡೆ, ನಿತೇಶ್ ವೈಷ್ಯ, ಧರ್ಮೇಂದ್ರ ಶರ್ಮಾ ಮತ್ತಿತರರು ಉಪಸ್ಥಿತರಿದ್ದರು.