ಮೈಸೂರು: ಬಸ್ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಕಣ್ಗಾವಲು ತಪಾಸಣಾ ಕೇಂದ್ರವನ್ನು ಸ್ಥಾಪಿಸಿ ಹದ್ದಿನ ಕಣ್ಣಿಡುವಂತೆ
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು ಅನುಮಾನಾಸ್ಪದ ಚಟುವಟಿಕೆಗಳು ಹಾಗೂ ವ್ಯಕ್ತಿಗಳನ್ನು ಪರಿಶೀಲಿಸುವಂತೆ ಆದೇಶಿಸಿದರು.
ಬಸ್ಗಳಲ್ಲಿ ಅಳವಡಿಸಿರುವ ಸರ್ಕಾರದ ಯೋಜನೆಗಳ ಜಾಹೀರಾತುಗಳನ್ನು ಕೂಡಲೇ ತೆರವುಗೊಳಿಸಬೇಕು, ಸಿಟಿ ಬಸ್ ಸ್ಟ್ಯಾಂಡ್ ಸಬರ್ ಬಸ್ ಸ್ಟ್ಯಾಂಡ್ ಗಳಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆದು ಪರಿಶೀಲನೆ ನಡೆಸಿ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಜಿಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.
14 ರೈಲ್ವೆ ಸ್ಟೇಷನ್ ಗಳಲ್ಲಿ ಟ್ರೈನ್ ಗಳು ಬರುವ ಸಮಯದ ಆಧಾರದ ಮೇಲೆ ಬೋರ್ಡಿಂಗ್ ಸಮಯದಲ್ಲಿ ಸ್ಟೇಷನ್ ಅಧಿಕಾರಿಗಳು ಪರಿಶೀಲನೆ ನಡೆಸಲು ಕ್ರಮ ವಹಿಸಬೇಕು.
ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ ಶಿಫ್ಟ್ ಆಧಾರದ ಮೇಲೆ ಕೆಲಸ ನಿರ್ವಹಿಸಬೇಕು.
ಮೈಸೂರು ವಿಮಾನ ನಿಲ್ದಾಣದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ತಂಡದವರು ಆಗಮಿಸುವ ಚಾಪರ್, ಹೆಲಿಕ್ಯಾಪ್ಟರ್ ವಿಮಾನಗಳನ್ನು ಹಾಗೂ ಆಗಮಿಸುವ ಪ್ರವಾಸಿಗರನ್ನು ಪರಿಶೀಲನೆ ನಡೆಸಬೇಕು ಎಂದು ರಾಜೇಂದ್ರ ಸೂಚಿಸಿದರು.
ಕೆಎಸ್ಆರ್ ಟಿಸಿ ಚಾಲಕರು ಹಾಗೂ ನಿರ್ವಾಹಕರಿಗೆ ಮನವರಿಕೆ ಮಾಡಬೇಕು. ಈ ಮೂಲಕ ಚೆಕ್ ಪೋಸ್ಟ್ ಗಳಲ್ಲಿ ಬಸ್ ಗಳ ಪರಿಶೀಲನೆ ಮಾಡಲು ಅವರು ಸಹಕರಿಸುವಂತೆ ಸೂಚಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರಣಕ್ಕೆ ಮತದಾನದಿಂದ ಹೊರಗುಳಿಯುವಂತಿಲ್ಲ. ತಪ್ಪದೇ ಎಲ್ಲಾ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರು ಮತದಾನದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಮ್. ಗಾಯತ್ರಿ, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಮ್, ಉಪವಿಭಾಗಾಧಿಕಾರಿ ಕಮಲಾ ಭಾಯಿ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.