ವಿಜೃಂಭಣೆಯಿಂದ ನೆರವೇರಿದ ವೈರಮುಡಿ ಬ್ರಹ್ಮೋತ್ಸವ

ಮಂಡ್ಯ: ದಕ್ಷಿಣ ಭಾರತದ ಪ್ರಸಿದ್ಧ ವೈಷ್ಣವ ಕ್ಷೇತ್ರಗಳಲ್ಲೊಂದಾದ ಮೇಲುಕೋಟೆಯ ಶ್ರೀಚಲುವನಾರಾಯಣಸ್ವಾಮಿಯ ವಿಶ್ವವಿಖ್ಯಾತ ವೈರಮುಡಿ ಬ್ರಹ್ಮೋತ್ಸವ ಭಾನುವಾರ ಮುಂಜಾನೆ ಸಹಸ್ರಾರು ಭಕ್ತರ ಹರ್ಷೋದ್ಘಾರದ ನಡುವೆ ವೈಭವದಿಂದ ನಡೆಯಿತು.

ವಜ್ರಖಚಿತ ಕಿರೀಟ ಧರಿಸಿದ ಚೆಲುವನಾರಾಯಣಸ್ವಾಮಿ ಉತ್ಸವ ಮೂರ್ತಿ ದೇವಾಲಯದ ಹೊರಗೆ ಬರುತ್ತಿದ್ದಂತೆ ಭಕ್ತರು ಜಯಘೋಷ ಮೊಳಗಿಸಿದರು.

ವೈರಮುಡಿಗೆ ರಾಮಾನುಜಾಚಾರ್ಯರ ಸನ್ನಿಧಿಯಲ್ಲಿ ಪ್ರಥಮ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ದೊರಯಿತು.

ಭಕ್ತರು ಭಗವಂತನ ಕಿರೀಟ ಎಂದೇ ನಂಬಿರುವ ವೈರಮುಡಿ ಕಿರೀಟ ಧರಿಸಿ ಕಂಗೊಳಿಸುತ್ತಿದ್ದ ಸ್ವಾಮಿಯ ದರ್ಶನ ಪಡೆದು ಪುನೀತರಾದರು.

ಇದಕ್ಕೂ ಮುನ್ನ ಮಂಡ್ಯದ ಜಿಲ್ಲಾ ಖಜಾನೆಯಿಂದ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಮಂಡ್ಯಮೇಲುಕೋಟೆ ಮಾರ್ಗ ಮಧ್ಯದ ನಾನಾ ಹಳ್ಳಿಗಳಲ್ಲಿ ಗ್ರಾಮಸ್ಥರು ವೈರಮುಡಿಗೆ ಪೂಜೆ ಸಲ್ಲಿಸಿ ಸಂಜೆ .೩೦ರ ವೇಳೆಗೆ ವೈರಮುಡಿ ದಕ್ಷಿಣ ಬದರೀಕಾಶ್ರಮ ಮೇಲುಕೋಟೆ ತಲುಪಿತು.

ವೈರಮುಡಿ, ರಾಜಮುಡಿ ಹಾಗೂ ಇತರ ವಜ್ರಾಭರಣಗಳ ಎರಡು ಗಂಟುಗಳನ್ನು ಚಿನ್ನದ ಪಲ್ಲಕ್ಕಿಯಲ್ಲಿಟ್ಟು ಚತುವರ‍್ದಗಳಲ್ಲಿ ಮೆರವಣಿಗೆ ಮೂಲಕ ದೇವಾಲಯಕ್ಕೆ ತರಲಾಯಿತು.

ದೇಗುಲದ ಸುತ್ತ ಒಂದು ಸುತ್ತು ಪ್ರದಕ್ಷಿಣೆ ಮಾಡಲಾಯಿತು.

ಪರ್ಕಾವಣೆ: ಸಂಜೆ .೧೫ಕ್ಕೆ ಜಿಲ್ಲಾಧಿಕಾರಿ ಗೋಪಾಲಕೃಷ್ಣ ನೇತೃತ್ವದಲ್ಲಿ ವೈರಮುಡಿ ಹಾಗೂ ಇತರ ಆಭರಣಗಳ ಪರಿಶೀಲನೆ (ಪರ್ಕಾವಣೆ) ನಡೆಸಲಾಯಿತು.

ವೈರಮುಡಿ ಹೊರತಾಗಿ ರಾಜಮುಡಿ ಸೇರಿದಂತೆ ನಾನಾ ಮಾದರಿಯ ಆಭರಣಗಳನ್ನು ಪರಿಶೀಲಿಸಲಾಯಿತು.

ಮೈಸೂರು ರಾಜವಂಶಸ್ಥ ಯುದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾ ಎಸ್‌ಪಿ ಯತೀಶ್ಪಾಂಡವಪುರ ಉಪಭಾಗಾಧಿಕಾರಿ ನಂದೀಶ್,ತಹಸೀಲ್ದಾರ್ ಸೌಮ್ಯ ಇತರರು ಪಾರ್ಕಾವಣೆಗೆ ಸಾಕ್ಷಿಯಾದರು.

ಬಳಿಕ ಅಲ್ಲಿ ಹಾಜರಿದ್ದ ಎಲ್ಲ ಅಧಿಕಾರಿಗಳು, ಸ್ಥಾನಿಕರು, ಪ್ರಮುಖ ಅರ್ಚಕರಿಂದ ಸಹಿ ಸಂಗ್ರಹಿಸಿ ನಂತರ ವೈರಮುಡಿ ಸಹಿತ ಎಲ್ಲ ಆಭರಣಗಳನ್ನು ದೇವಾಲಯದ ಸ್ಥಾನಿಕರಿಗೆ ಹಸ್ತಾಂತರಿಸಲಾಯಿತು.

ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ಇತರೆ ರಾಜ್ಯಗಳಿಂದ ಉತ್ಸವಕ್ಕೆ ಆಗಮಿಸಿದ್ದ ಅಸಂಖ್ಯಾತ ಭಕ್ತರ ಅನುಕೂಲಕ್ಕಾಗಿ ಅಳವಡಿಸಿದ್ದ ಎಲ್‌ಇಡಿ ಪರದೆ ಮೂಲಕ ಪಾರ್ಕಾವಣೆ ದೃಶ್ಯಗಳನ್ನು ನೇರ ಪ್ರಸಾರ ಮಾಡಲಾಯಿತು.

ಗರುಡೋತ್ಸವದ ಪ್ರದಕ್ಷಿಣೆ ನೆರವೇರಿಸುವ ಮೂಲಕ ರಾತ್ರಿ ಗಂಟೆಗೆ ಐತಿಹಾಸಿಕ ವೈರಮುಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ದೇವಸ್ಥಾನದಿಂದ ಉತ್ಸವ ಹೊರಗೆ ಬಂದಾಗ ವೈರಮುಡಿ ಧರಿಸಿದ್ದ ಸ್ವಾಮಿಯ ದರ್ಶನ ದೊರೆಯುತ್ತಿದ್ದಂತೆ ನೆರೆದಿದ್ದ ಭಕ್ತರು ಭಕ್ತಿ ಪರವಶರಾದರು.

ಶ್ರೀದೇವಿ, ಭೂದೇವಿಯರ ಮಧ್ಯೆ ಗರುಡಾರೂಢನಾದ ಶ್ರೀಚಲುವನಾರಾಯಣಸ್ವಾಮಿಯ ಉತ್ಸವ ಮೂರ್ತಿಯು ವೈರಮುಡಿ ಧರಿಸಿ ಕಂಗೊಳಿಸುತ್ತಿತ್ತು.

ವೇಳೆ ಭಕ್ತರು ನೂಕುನುಗ್ಗಲಿನ ನಡುವೆಯೂ ಸ್ವಾಮಿಗೆ ನಮಸ್ಕರಿಸಿ ಉದ್ಘೋಷ ಮೊಳಗಿಸಿದರು.

ಭಕ್ತರನ್ನು ನಿಯಂತ್ರಿಸಲು ಪೊಲೀಸರು, ದೇವಾಲಯ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.

ನೇರವಾಗಿ ಸ್ವಾಮಿಯ ದರ್ಶನ ಪಡೆಯಲಾಗದವರು ದೇವಸ್ಥಾನದ ಸುತ್ತಮುತ್ತ ಅಳವಡಿಸಿದ್ದ ಎಲ್‌ಇಡಿ ಪರದೆಗಳಲ್ಲಿ ಉತ್ಸವವನ್ನು ಕಣ್ತುಂಬಿಕೊಂಡರು.

ದೇವಾಲಯದ ಮುಖ್ಯದ್ವಾರದ ಬಳಿಯೇ ೩೦ ನಿಮಿಷಗಳ ಕಾಲ ಉತ್ಸವ ನಡೆಸಲಾಯಿತು.

ದೇವಾಲಯ ಸುತ್ತ ಹಾಗೂ ಪ್ರಮುಖ ರಾಜಬೀದಿಗಳಲ್ಲಿ ಸಂಚರಿಸಿದ ಉತ್ಸವವು ಬೆಳಗಿನ ಜಾವ ಗಂಟೆವರೆವಿಗೂ ನಡೆಯಿತು.

ಬಾರಿಯ ವೈರಮುಡಿ ಉತ್ಸವ ಅಧಿಕಾರಿಗಳು ಉಸ್ತುವಾರಿಯಲ್ಲೇ ನಡೆಯಿತು. ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ದೇವರ ದರ್ಶನ ಪಡೆದು, ಉಳಿದ ಧಾರ್ಮಿಕ ಕಾರ್ಯಗಳಿಂದ ದೂರ ಉಳಿದರು.

ಚುನಾವಣೆ ಘೋಷಣೆಗೂ ಮುನ್ನ ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಉತ್ಸವದ ಪೂರ್ವ ಸಿದ್ಧತೆಯ ಎಲ್ಲಾ ಕಾರ‍್ಯಗಳು ಮುಕ್ತಾಯಗೊಂಡಿದ್ದವು.

ಉಳಿದ ಕಾರ್ಯಗಳನ್ನು ಜಿಲ್ಲಾಧಿಕಾರಿ ಗೋಪಾಲಕೃಷ್ಣ ನಿರ್ವಹಿಸಿದರು.

ಗ್ರಾಮದ ಹೊರ ವಲಯದಲ್ಲೇ ಖಾಸಗಿ ವಾಹನಗಳನ್ನು ಕೆಲಕಾಲ ತಡೆದು ನಿಲ್ಲಿಸಲಾಗಿತ್ತು.

ವೈರಮುಡಿ ಉತ್ಸವದ ಹಿನ್ನೆಲೆಯಲ್ಲಿ ಮೇಲು ಕೋಟೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.