ಮೈಸೂರು: ಪಕ್ಷಿ,ಪ್ರಾಣಿಗಳಿಗೆ ನೀರಿನ ತೊಟ್ಟಿ ಅಳವಡಿಸುವುದು ಹಾಗೂ ಮಂಗಗಳಿಗೆ ಬಾಳೆಹಣ್ಣು ವಿತರಿಸುವ ಮೂಲಕ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಹಾವೀರ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಯಿತು.
ಟ್ರಸ್ಟ್ ನವರು ಮೈಸೂರು ನಗರದ ಚಾಮುಂಡಿ ಬೆಟ್ಟದ ಪಾದದಲ್ಲಿ ಪಕ್ಷಿ ಪ್ರಾಣಿಗಳಿಗೆ ನೀರಿನ ತೊಟ್ಟಿ ಅಳವಡಿಸಿ ಆನಂತರ ಮಂಗಗಳಿಗೆ ಬಾಳೆಹಣ್ಣು ನೀಡಿದರು.
ಈ ವೇಳೆ ಕೇಂದ್ರ ಪ್ರಾಣಿಗಳ ಕಲ್ಯಾಣ ಮಂಡಳಿಯ ರಾಜ್ಯ ಅಧ್ಯಕ್ಷ ಮಿತ್ತಲ್ ಮಾತನಾಡಿ,ಜೈನ ಧರ್ಮದ ಕೊನೆಯ ತೀರ್ಥಂಕರ ರಾಗಿದ್ದ ಭಗವಾನ್ ಮಹಾವೀರರು ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ತೋರಿಸಿದರು ಎಂದು ಹೇಳಿದರು.
ಮನುಷ್ಯ ಹುಟ್ಟಿನಿಂದಲೇ ಶ್ರೇಷ್ಠನಾಗುವುದಿಲ್ಲ. ಸತ್ಯದ ಹಾದಿಯಲ್ಲಿ, ದಾರ್ಶನಿಕರ ತತ್ವ–ಸಿದ್ಧಾಂತಗಳನ್ನು ನಂಬಿ ನಡೆದಾಗ ಅವನ ಜೀವನ ಶ್ರೇಷ್ಠವಾಗುವುದು ಎಂದು ಅಭಿಪ್ರಾಯಪಟ್ಟರು.
ಬಿಸಿಲಿನ ಬೇಗೆಯಿಂದ ಎಲ್ಲ ಜೀವಿಗಳು ತತ್ತರಿಸುತ್ತಿವೆ. ಮನುಷ್ಯರಷ್ಟೇ ಅಲ್ಲ, ಪ್ರಾಣಿ ಪಕ್ಷಿಗಳು ನೀರು, ಆಹಾರಕ್ಕಾಗಿ ಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಾಣಿ, ಪಕ್ಷಿಗಳ ಸಂಕಷ್ಟ ಅರಿತು ಮಹಾವೀರ ಜಯಂತಿ ಅಂಗವಾಗಿ ನೀರಿನ ತೊಟ್ಟಿ ಅಳವಡಿಸಲು ಕೆಎಂಪಿಕೆ ಟ್ರಸ್ಟ್ ನವರು ಮುಂದಾಗಿದ್ದಾರೆ ಇದು ಎಲ್ಲರಿಗೂ ಮಾದರಿ ಎಂದು ತಿಳಿಸಿದರು.
ಮನುಷ್ಯನ ಜೀವ ಎಷ್ಟು ಮುಖ್ಯವೋ ಪ್ರಾಣಿ, ಪಕ್ಷಿಗಳ ಜೀವ ಕೂಡ ಅಷ್ಟೇ ಮುಖ್ಯ. ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಜಲಮೂಲಗಳು ಬತ್ತುತ್ತಿವೆ.
ಕುಡಿಯುವ ನೀರಿಗೂ ತತ್ವಾರ ಶುರುವಾಗಿದೆ. ನೀರಿಗಾಗಿ ಮೈಲಿಗಟ್ಟಲೆ ಅಲೆಯಬೇಕಾಗಿದೆ. ಇದು ಸಣ್ಣ ಪಕ್ಷಿ, ಪ್ರಾಣಿಗಳ ಬದುಕಿಗೆ ಮಾರಕವಾಗಿದೆ ಎಂದು ಮಿತ್ತಲ್ ಹೇಳಿದರು.
ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಪೃಥ್ವಿ ಸಿಂಗ್ ಚಂದಾವತ, ಜೈ ಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷ ಚೇತನ್ ಕಾಂತರಾಜು, ರಾಕೇಶ್, ಸಚಿಂದ್ರ,ಮತ್ತಿತರರು ಭಾಗವಹಿಸಿದ್ದರು