ನೀತಿ ಸಂಹಿತೆ ಉಲ್ಲಂಘಿಸಿದರೆ ಪ್ರಕರಣ ದಾಖಲಿಸಿ -ಡಾ. ರಾಜೇಂದ್ರ

ಮೈಸೂರು: ಮಾದರಿ ನೀತಿ ಸಂಹಿತೆ  ಉಲ್ಲಂಘಿಸುವ ಯಾವುದೇ ರೀತಿಯ ಚಟುವಟಿಕೆಗಳು ಕಂಡು ಬಂದರೆ ನಿರ್ಧಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಿ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ ಅವರು ಸೂಚಿಸಿದರು.

ಚಾಮುಂಡೇಶ್ವರಿ ಮತ್ತು ಚಾಮರಾಜ ವಿಧಾನಸಭಾ ಕ್ಷೇತ್ರಗಳ ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಸ್ಟಾಟಿಸ್ಟಿಕ್ ಸರ್ವೇಲೆನ್ಸ್ ತಂಡದ ಸದಸ್ಯರು ನಿರ್ವಹಿಸಬೇಕಾದ ಕರ್ತವ್ಯಗಳು ಮತ್ತು ಜವಾಬ್ದಾರಿ ಕುರಿತು ಏರ್ಪಡಿಸಿದ್ದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ತೆರೆದಿರುವ ಚೆಕ್ ಪೋಸ್ಟ್ ಗಳಲ್ಲಿ ಸೂಕ್ಷ್ಮವಾಗಿ ವಾಹನ ತಪಾಸಣೆ ಮಾಡಬೇಕು. ತಪಾಸಣೆ ವೇಳೆ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ರಾಜೇಂದ್ರ ತಿಳಿಸಿದರು.

 ಜಿಲ್ಲಾ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಎಂ ಗಾಯತ್ರಿ ಅವರು ಮಾತನಾಡಿ, ಇದು ಚುನಾವಣಾ ಹಬ್ಬ. ಸರ್ಕಾರವನ್ನು ರಚನೆ ಮಾಡಲು ನಾಯಕರನ್ನು ಆಯ್ಕೆ ಮಾಡುವ ಚುನಾವಣೆ ಪ್ರಕ್ರಿಯೆಯಲ್ಲಿ ತಾವು ಭಾಗಿಗಳಾಗುತ್ತಿದ್ದೀರಿ ಎಂಬ ಹೆಮ್ಮೆ ಇರಲಿ ಎಂದರು.

ತಮಗೆ ಯಾವುದೇ ಗೊಂದಲಗಳಿದ್ದರೆ ರಿಟರ್ನಿಂಗ್ ಆಫೀಸರ್ ಗಳ ಹತ್ತಿರ ಬಗೆಹರಿಸಿಕೊಳ್ಳಿ. ಚರ್ಚ್, ಮಸೀದಿ ಹಾಗೂ ದೇವಸ್ಥಾನಗಳ ಮುಂದೆ ಯಾವುದೇ ರೀತಿ ಪ್ರಚಾರ ಮಾಡುವಂತಿಲ್ಲ. ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಮೆರವಣಿಗೆಗೆ, ಸಭೆ ಸಮಾರಂಭಗಳಿಗೆ ಕಡ್ಡಾಯವಾಗಿ ಅನುಮತಿ ಪಡೆದಿರಬೇಕು. ವಿಡಿಯೋ ವ್ಯಾನ್‌ಗಳಿಗೆ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ ಅನುಮತಿ ಪಡೆದಿರಬೇಕು. ಮತದಾನ ಮುಕ್ತಾಯವಾಗುವ 48 ಗಂಟೆ ಮುಂಚೆ ಬಹಿರಂಗ ಪ್ರಚಾರಗಳು ಅಂತ್ಯವಾಗಬೇಕು. ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಮತ್ತು ಪ್ರಾಣಿಗಳನ್ನು ಬಳಸಿಕೊಳ್ಳುವಂತಿಲ್ಲ ಎಂದು ತಿಳಿಸಿದರು.

 ಪ್ರಾಚ್ಯ ವಸ್ತು ಸಂಗ್ರಹಾಲಯದ ಆಯುಕ್ತ ದೇವರಾಜ್ ಅವರು ಮಾತನಾಡಿ, ಚುನಾವಣೆ ಕರ್ತವ್ಯದಲ್ಲಿ ಯಾವುದೇ ಲೋಪಗಳು ಆಗಬಾರದು. ನಾವು ಮಾಡುವ ಕೆಲಸದಲ್ಲಿ ಅರಿವು ಇಲ್ಲದೆ ಇದ್ದಾಗ ಲೋಪಗಳು ಉಂಟಾಗುತ್ತವೆ. ಆದ್ದರಿಂದ ಈ ತರಬೇತಿ ನೀಡಲಾಗುತ್ತಿದೆ. ಈ ಹಿಂದೆ ಅಸಂಖ್ಯಾತ ಬ್ಯಾನರ್ ಗಳು, ಮೈಕ್‌ಗಳಲ್ಲಿ ಪ್ರಚಾರ ಹೆಚ್ಚಾಗಿ ಇರುತ್ತಿತ್ತು, ಆದರೆ ಈಗ ಎಲ್ಲವೂ ನಿಯಮ ಬದ್ಧವಾಗಿ ಅನುಮತಿ ಪಡೆದುಕೊಂಡು ಮಾಡಬೇಕು. ಎಫ್.ಎಸ್.ಟಿ ತಂಡದವರಿಗೆ ತಮ್ಮ ವ್ಯಾಪ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ಇರಬೇಕು ಎಂದು ಸೂಚಿಸಿದರು.

 ಯಾವುದೇ ಅಧಿಕಾರಿಗಳು ಮತ್ತು ಪಕ್ಷಗಳು ವೈಯಕ್ತಿಕ ಟೀಕೆಗಳನ್ನು ಮಾಡುವಂತಿಲ್ಲ. ಯಾವುದೇ ಸರ್ಕಾರಿ ಕಚೇರಿ ಕಾಂಪೌoಡ್‌ಗಳ ಮೇಲೆ ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಅಂಟಿಸುವoತಿಲ್ಲ. ಬಹಿರಂಗ ಸಭೆ/ಸಮಾರಂಭಗಳ ವಿಡಿಯೋ ರೆಕಾರ್ಡಿಂಗ್ ಆಗಬೇಕು. ಬೈಕ್ ರ‍್ಯಾಲಿ ಹಾಗೂ ಕಾರು ರ‍್ಯಾಲಿಗಳಿಗೆ ಬೈಕ್ ಹಾಗೂ ಕಾರುಗಳ ನೋಂದಣಿ ಸಂಖ್ಯೆ ಸಮೇತ ಅನುಮತಿ ಪಡೆದಿರಬೇಕು. ಬೇರೆ ವಾಹನಗಳನ್ನು ಬಳಸಲು ಅವಕಾಶ ಇರುವುದಿಲ್ಲ. ಪೋಸ್ಟರ್ ಮತ್ತು ಪಾಂಪ್ಲೆಟ್ಸ್ ಗ ಳಲ್ಲಿ ಪ್ರಿಂಟರರ್ಸ್ ಮತ್ತು ಪಬ್ಲಿಕೇಷನ್ಸ್ ಹೆಸರು, ವಿಳಾಸ, ಹಾಗೂ ಪ್ರತಿಗಳ ಸಂಖ್ಯೆ ಮುದ್ರಣ ಕಡ್ಡಾಯವಾಗಿರಬೇಕು. ರಾತ್ರಿ 10 ಗಂಟೆಯಿoದ ಬೆಳಗ್ಗೆ 6 ಗಂಟೆಯವರೆಗೆ ಚುನಾವಣೆ ಪ್ರಚಾರ ಮಾಡುವಂತಿಲ್ಲ ಎಂದು ತಿಳಿಸಿದರು.

ತರಬೇತಿಯಲ್ಲಿ ಉಪ ಪೊಲೀಸ್ ಆಯುಕ್ತ ಮುತ್ತುರಾಜ್, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ನಿರ್ದೇಶಕ ತಂಬಣ್ಣ ಅವರು ಸೇರಿದಂತೆ ಇತರರು ಭಾಗವಹಿಸಿದ್ದರು.