ಮೈಸೂರಲ್ಲಿ ಶಾಂತಿಯುತ ಮತದಾನಕ್ಕೆ ಪೊಲೀಸರು ಸಜ್ಜು

ಮೈಸೂರು: ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಲ್ಲಿ ಶಾಂತಿಯುತ ಮತದಾನ ನಡೆಸಲು ಪೊಲೀಸರು ಸಜ್ಜಾಗಿದ್ದು ನಗರದಲ್ಲಿ ಪಥ ಸಂಚಲನ ನಡೆಸಿದರು.

ಮೈಸೂರಿನಾದ್ಯಂತ ಸಿಐಎಸ್ ಎಫ್ ಪಡೆ ಜತೆ ಸ್ಥಳೀಯ ಪೊಲೀಸರು ಪಥ ಸಂಚನ ನಡೆಸಿ ಮತದಾರರಿಗೆ ನಿಮ್ಮೊಂದಿಗೆ  ನಾವಿದ್ದೇವೆ ಎಂಬ ಭರವಸೆ ಮೂಡಿಸಿದರು.

ಸಮಾಜಘಾತುಕ ಶಕ್ತಿಗಳನ್ನ ಸದೆಬಡಿಯಲು ಸನ್ನದ್ದರಾಗಿದ್ದೇವೆ, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ ಎಂಬ ಸಂದೇಶವನ್ನು ಪಥ ಸಂಚನದ ಮೂಲಕ ನೀಡಿದರು.

ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ರಸ್ತೆ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ  ಪಥಸಂಚಲನ ನಡೆಸಿ ಸಾರ್ವಜನಿಕರಿಗೆ ಪೊಲೀಸರು ಅಭಯ ನೀಡಿದ್ದಾರೆ.

ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ಭಯವಾಗಿ ಪಾಲ್ಗೊಳ್ಳುವಂತೆ ಜನತೆಗೆ ಆತ್ಮಸ್ಥೈರ್ಯ ತುಂಬಿದರು.

ಲಷ್ಕರ್ ಠಾಣೆ ನಿರೀಕ್ಷಕ ಸಂತೋಷ್ ಅವರ ನೇತೃತ್ವದಲ್ಲಿ 250ಕ್ಕೂ ಹೆಚ್ಚು ಪೊಲೀಸರು ರೂಟ್ ಮಾರ್ಚ್ ನಲ್ಲಿ ಭಾಗವಹಿಸಿದ್ದರು.

ಚುನಾವಣೆ ವೇಳೆ ಅಹಿತಕರ ಘಟನೆಗೆ ಕಾರಣರಾಗುವ ಕಿಡಿಗೇಡಿಗಳಿಗೂ ಈ ಮೂಲಕ ಎಚ್ಚರಿಕೆ ನೀಡಿದರು.

ಕೇಂದ್ರದಿಂದ ಒಂದು ಬೆಟಾಲಿಯನ್  ಸಿಐಎಸ್ ಎಫ್ ಸಿಬ್ಬಂದಿ ಆಗಮಿಸಿದ್ದು ಸ್ಥಳೀಯ ಪೊಲೀಸರಿಗೆ ಸಾಥ್ ನೀಡಿದ್ದಾರೆ.

ನಗರದಲ್ಲಿನ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಐಎಸ್ ಎಫ್ ಸಿಬ್ಬಂದಿ ಪಥ ಸಂಚಲನ ನಡೆಸಿ ಜನತೆ ಮುಕ್ತ ಮತದಾನದಾನ ಮಾಡುವಲ್ಲಿ ಯಾವುದೇ ಭಯ‌ ಬೇಡ ಎಂದು ಸಂದೇಶ ನೀಡಿದ್ದಾರೆ.

ಸಿಐಎಸ್ ಎಫ್ ಸಿಬ್ಬಂದಿಗಳು,ಮಹಿಳಾ ಪೊಲೀಸರು ಸೇರಿದಂತೆ ಇಲಾಖೆಯ ವಿವಿಧ ವಿಭಾಗದ ಸಿಬ್ಬಂದಿ ಪಥಸಂಚಲನದಲ್ಲಿ ಭಾಗಿಯಾಗಿದ್ದರು.