ಚಾಮರಾಜನಗರ: ಹುಲಿ ಯೋಜನೆ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ, ಓಪನ್ ಜೀಪ್‌ನಲ್ಲಿ ವನ್ಯಜೀವಿ ಸಫಾರಿ ನಡೆಸಿದರು.
ಟೋಪಿ, ಗಾಗಲ್ಸ್ ಜೊತೆಗೆ ಸಫಾರಿ ದಿರಿಸಿನಲ್ಲಿ ಕಾಡಿನಲ್ಲಿ ಮೋದಿ ಸಂಚರಿಸಿ ಅರಣ್ಯದ ಸೊಬಗನ್ನು ಸವಿದರು.
ಸಫಾರಿ ವೇಳೆ ಹುಲಿ ಸೇರಿ ಮತ್ತಿತರ ಪ್ರಾಣಿಗಳನ್ನು ಮೋದಿ ನೋಡಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟು 9 ವಾಹನಗಳು ಪ್ರಧಾನಿ ಅವರ ಜೊತೆಗಿದ್ದು, ಸಫಾರಿ ಬಳಿಕ ತಮಿಳುನಾಡಿನ ತೆಪ್ಪಕಾಡಿನ ಆನೆ ಶಿಬಿರಕ್ಕೆ ಭೇಟಿ ನೀಡಿದರು
ಅಲ್ಲಿ ಆನೆಗಳಿಗೆ ಕಬ್ಬು ತಿನ್ನಿಸಿ ಖುಷಿ ಪಟ್ಟರು. ಆನೆಗಳು ಮೋದಿ ಅವರಿಗೆ ನಮಸ್ಕರಿಸಿದವು.
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕೇವಲ ಅಧಿಕಾರಿಗಳು ಮಾತ್ರ ಪ್ರಧಾನಿ ಜೊತೆಗಿದ್ದರು.
ಪ್ರಧಾನಿ ಅವರು ಸಾಗುತ್ತಿದ್ದ ಕಾರಿನಲ್ಲೇ ಬಂಡೀಪುರದ ಸುತ್ತಮುತ್ತಲ ಗ್ರಾಮಸ್ಥರು ಕಣ್ತುಂಬಿಕೊಳ್ಳಬೇಕಾಯಿತು.
ಆದರೂ ಮೋದಿಯವರು ಬಂಡೀಪುರಕ್ಕೆ ಭೇಟಿ ನೀಡಿರುವುದು ಈ ಭಾಗದ ಜನರಲ್ಲಿ ಸಂತಸ ತಂದಿದೆ.
ಕಳೆದ ರಾತ್ರಿ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರು ಭಾನುವಾರ ಬೆಳಗ್ಗೆ 7.30ಕ್ಕೆ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಸಮೀಪ ನಿರ್ಮಿಸಿರುವ ಹೆಲಿಪ್ಯಾಡ್‍ಗೆ ಬಂದಿಳಿದರು.
ವಿಶೇಷ ಹೆಲಿಕಾಪ್ಟರ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂಡೀಪುರಕ್ಕೆ ಆಗಮಿಸಿ ಟೈಗರ್ ರಿಸರ್ವ್ ಲೋಗೋ ಇರುವ ಜಾಕೆಟ್, ಅರಣ್ಯ ಇಲಾಖೆ ಸಮವಸ್ತ್ರ ಹೋಲುವ ಟೀ ಶರ್ಟ್ ಅನ್ನು ಧರಿಸಿ ಮಿಂಚಿದರು.
ಮೋದಿ ಆಗಮನದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವೂ ಬಂದ್ ಆಗಿದ್ದು, ತಮಿಳುನಾಡು ಮತ್ತು ಕರ್ನಾಟಕ ಪೊಲೀಸರು ಭಾರೀ ಭದ್ರತೆ ಕೈಗೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಣ್ಣುಂಬಿಕೊಳ್ಳುವ ಅವಕಾಶದಿಂದ ಅಭಿಮಾನಿಗಳು ವಂಚಿತರಾಗಿದ್ದಾರೆ.
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದ್ದು, ಜನರ ಪ್ರವೇಶವನ್ನು ಗುಂಡ್ಲುಪೇಟೆಯ ಊಟಿ ಗೇಟ್‍ನಲ್ಲೇ ತಡೆಯಲಾಯಿತು.
ಮೋದಿ ಅವರು ಗುಂಡ್ಲುಪೇಟೆಗೆ ಬಂದರೂ ಅವರನ್ನು ಕಾಣುವ ಆಸೆ ಜನರಿಗೆ ಈ ಬಾರಿ ಈಡೇರುತ್ತಿಲ್ಲ.
ಅವಸಾನದತ್ತ ಸಾಗಿದ್ದ ಹುಲಿ ಸಂತತಿಯನ್ನು ಹೇಗಾದರೂ ಮಾಡಿ ಉಳಿಸಲೇಬೇಕೆಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು 1973 ರಲ್ಲಿ ಹುಲಿ ರಕ್ಷಿತಾರಣ್ಯಗಳನ್ನು ಘೋಷಣೆ ಮಾಡಿ ಪ್ರಾಜೆಕ್ಟ್ ಟೈಗರ್ ಯೋಜನೆ ಆರಂಭಿಸಿದ್ದರು.
ಅಂದು ಆರಂಭಗೊಂಡ ಹುಲಿ ರಕ್ಷಿತ ಅರಣ್ಯಗಳಲ್ಲಿ ಬಂಡೀಪುರವೂ ಒಂದಾಗಿದ್ದು, ಈಗ ಸುವರ್ಣ ಸಂಭ್ರಮದಲ್ಲಿದೆ,
ಈ ಹಿನ್ನೆಲೆಯಲ್ಲಿ ಮೋದಿ ಅವರು ಬಂಡೀಪುರಕ್ಕೆ ಭೇಟಿ ಕೊಟ್ಟರು.
ಬಂಡೀಪುರ ವಲಯದಲ್ಲಿ ಸಫಾರಿ ಬಳಿಕ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಇಲ್ಲಿ ಆನೆ ಮರಿ ಉಳಿಸಿದ ಹಾಗೂ ಆಸ್ಕರ್ ಪಡೆದ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರದ ಪಾತ್ರಧಾರಿಗಳಾದ ಬೊಮ್ಮ- ಬೆಳ್ಳಿ ದಂಪತಿಯನ್ನು ಸನ್ಮಾನಿಸಿದರು.
ಉತ್ತಮ ತಂತ್ರಜ್ಞಾನ ಮತ್ತು ಸಂರಕ್ಷಣಾ ಕಾರ್ಯವಿಧಾನಗಳಿಂದಾಗಿ ಹುಲಿ ಬೇಟೆಯಾಡುವಿಕೆಯು ಗಣನೀಯವಾಗಿ ಕಡಿಮೆಯಾಗಿದೆಯಾದರೂ, ಆವಾಸಸ್ಥಾನದ ವಿಘಟನೆ ಮತ್ತು ಅವನತಿಯ ಜೊತೆಗೆ ದೊಡ್ಡ ಬೆಕ್ಕುಗಳಿಗೆ ಇದು ಇನ್ನೂ ದೊಡ್ಡ ಬೆದರಿಕೆಯಾಗಿದೆ ಎಂದು ಹೆಚ್ಚುವರಿ ಅರಣ್ಯ ಮಹಾನಿರ್ದೇಶಕ ಎಸ್‍ಪಿ ಯಾದವ್ ಹೇಳಿದ್ದಾರೆ.