ಕರ್ನಾಟಕ ಸೇನಾ ಪಡೆಯಿಂದ ನಂದಿನಿ ಉಳಿಸಿ ಹೋರಾಟ

ಮೈಸೂರು: ಕರ್ನಾಟಕದ ರೈತರು ಕಷ್ಟಪಟ್ಟು ಬೆವರು ಹರಿಸಿ ಬೆಳೆಸಿದ ನಂದಿನಿ ಬ್ರಾಂಡನ್ನು ಮುಗಿಸಲೆಂದೇ, ಅಮುಲ್ ಗುಜರಾತಿ ಹಾಲು ಮೊಸರನ್ನು ರಾಜ್ಯಕ್ಕೆ ತರಲಾಗುತ್ತಿದೆ ಎಂದು ಕರ್ನಾಟಕ ಸೇನಾ ಪಡೆ‌ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಮೈಸೂರಿನ ಅಗ್ರಹಾರದ ನಂದಿನಿ ಮಳಿಗೆ ಮುಂಭಾಗ ಕರ್ನಾಟಕ ಸೇನಾಪಡೆ ಹಮ್ಮಿಕೊಂಡಿದ್ದ ಕೆಎಂಎಫ್ ನಂದಿನಿ-ಉಳಿಸಿ ಪ್ರತಿಭಟನೆ ವೇಳೆ ಅವರು ಮಾತನಾಡಿದರು.

ಕರ್ನಾಟಕದ ರೈತರನ್ನು ಭಿಕ್ಷುಕರನ್ನಾಗಿಸುವ ಸಂಚು ನಡೆಯುತ್ತಿದೆ ಎಂದು ಅವರು ದೂರಿದರು.

ಇದು ಕನ್ನಡಿಗರ ಸ್ವಾಭಿಮಾನದ ಬ್ರಾಂಡ್. ಜೊತೆಗೆ ಪುನೀತ್ ರಾಜಕುಮಾರ್ ರಾಯಭಾರಿಯಾಗಿ ರೈತರ ಬೆನ್ನೆಲುಬಾಗಿದ್ದರು.

ಪರೋಕ್ಷವಾಗಿ ನಂದಿನಿ ಮೊಸರಿನ ಪ್ಯಾಕೆಟ್ ಮೇಲೆ ಹಿಂದಿಯಲ್ಲಿ ದಹಿ ಎಂದು ಬರೆಯಬೇಕೆಂದು ಕೇಂದ್ರದಿಂದ ಆದೇಶ ಹೊರಡಿಸಲಾಯಿತು.ಇದಕ್ಕೆ ಕನ್ನಡಿಗರು ವಿರೋಧ ವ್ಯಕ್ತಪಡಿಸಿದಾಗ ಆದೇಶವನ್ನು ಹಿಂಪಡೆಯಲಾಯಿತು.

ಈಗ ಆನ್ಲೈನ್ ನಲ್ಲಿ ಅಮೂಲ್ ಹಾಲು-ಮೊಸರು ರಾಜ್ಯ ಮಾರುಕಟ್ಟೆಗೆ ಬಂದಿದ್ದು, ಜತೆಗೆ ಸದ್ದೇ ಇಲ್ಲದೆ, ಬೆಂಗಳೂರಿನಲ್ಲಿ ತಲೆ ಎತ್ತುತ್ತಿದೆ ಅಮೂಲ್ ನ ದೊಡ್ಡ ಡೈರಿ ಎಂದು ಹೇಳಿದರು.

ಮುಂದೊಂದು ದಿನ ದೊಡ್ಡ ಮಟ್ಟದಲ್ಲಿ ಅಭಾವ ಸೃಷ್ಟಿಸಿ ಕೆಎಂಎಫ್ ನಂದಿನಿ ನಷ್ಟದಲ್ಲಿ ಇದೆ ಎಂದು ಕಾರಣ ನೀಡಿ ಅಮೂಲ್ ಜೊತೆ ವಿಲೀನ ಮಾಡುವ ಸಂಚು ರೂಪಿಸಲಾಗುತ್ತಿದೆ ಎಂದು ತೇಜೇಶ್ ‌ಲೋಕೇಶ್‌ ಗೌಡ ದೂರಿದರು.

ಹಿಂದೆ ರಾಜ್ಯದಲ್ಲಿ ಲಾಭದಲ್ಲಿದ್ದ ಕರ್ನಾಟಕದ ಬ್ಯಾಂಕುಗಳನ್ನು, ನಷ್ಟದಲ್ಲಿದ್ದ ಉತ್ತರ ಭಾರತದ ಬ್ಯಾಂಕುಗಳೊಂದಿಗೆ ವಿಲೀನ ಮಾಡಿದರು.

ಇದೇ ರೀತಿ ನಂದಿನಿಯನ್ನು ಅಮೂಲ್ ಜೊತೆ ವಿಲೀನಗೊಳಿಸಲು ಹುನ್ನಾರ ನಡೆಯುತ್ತಿವೆ. ಈ ವಿಲೀನವಾದರೆ ರಾಜ್ಯದ ರೈತರಿಗೆ ಅಪಾರ ನಷ್ಟ ಉಂಟಾಗುತ್ತದೆ.

ದೇಶದಲ್ಲಿ ಅಮೂಲ್ ನ ಏಕಸ್ವಾಮ್ಯ ದಿಂದ ರಾಜ್ಯದ ರೈತರು ತತ್ತರಿಸಿ ಹೋಗುತ್ತಾರೆ, ಅವರ ಹಾಲಿಗೆ ಒಳ್ಳೆಯ ಬೆಲೆ ಸಿಗದಂತಾಗುತ್ತದೆ, ಅಮೂಲ್ ನವರು ನಿಗದಿ ಮಾಡಿದ ಹಣವನ್ನೇ ಪಡೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗುಜರಾತಿ ಅಮೂಲ್ ನ ಉತ್ಪನ್ನಗಳನ್ನು ತಿರಸ್ಕರಿಸುವ ಮೂಲಕ ರಾಜ್ಯದ ರೈತರ ಹಿತವನ್ನು ಕಾಪಾಡಬೇಕು ಹಾಗೂ ಈ ವಿಲೀನಕ್ಕೆ ರಾಜ್ಯಪಾಲರು ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು.

ಸಿ. ಎಚ್. ಕೃಷ್ಣಯ್ಯ, ಡಾ. ಶಾಂತರಾಜೇಅರಸ್, ಪ್ರಜೀಶ್ ಪಿ, ಗೋಲ್ಡ್ ಸುರೇಶ್, ರಾಧಾಕೃಷ್ಣ, ಕುಮಾರ್ ಗೌಡ, ಜೂ. ವಿಷ್ಣುವರ್ಧನ್, ಗಿರೀಶ್ ಗೌಡ, ಡಾ. ನರಸಿಂಹೇಗೌಡ, ಲತಾ ರಂಗನಾಥ್, ಅಂಬಾ ಅರಸ್, ಎಸ್ ಚಂದ್ರು,, ಎಳನೀರು ರಾಮಣ್ಣ, ಗೊರೂರು ಮಲ್ಲೇಶ್, ಸಿದ್ದರಾಜು, ದರ್ಶನ್ ಗೌಡ, ಹನುಮಂತಯ್ಯ, ಸುಂದರಪ್ಪ, ಕೃಷ್ಣಮೂರ್ತಿ, ರಾಮನಾಯಕ, ರವಿ ನಾಯಕ್, ಶ್ರೀಕಂಠೇಗೌಡ ಮತ್ತಿತರರು ಪಾಲ್ಗೊಂಡಿದ್ದರು.