ನಂದಿನಿ ಹಾಲು,ಸಿಹಿ ಖರೀದಿಸಿ ಅಮೂಲ್ ವಿರೋಧಿಸಿದ ಡಿಕೆಶಿ

ಹಾಸನ : ರಾಜ್ಯದಲ್ಲಿ ಆಮೂಲ್ ಉತ್ಪನ್ನ ಮಾರಾಟಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು ಇತ್ತ ನಂದಿನಿ ಉತ್ಪನ್ನ ಖರೀದಿಸುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಹಾಸನದ ಹೇಮಾವತಿ ಪ್ರತಿಮೆ ಬಳಿ ಇರುವ ನಂದಿನಿ ಡೈರಿಗೆ ಆಗಮಿಸಿದ ಡಿಕೆಶಿ ಹಾಲು, ತುಪ್ಪ, ಪ್ಲೇ ವರ್ಡ್ ಮಿಲ್ಕ್, ಮಜ್ಜಿಗೆ, ಮೈಸೂರು ಪಾಕ್ ಸೇರಿ ಹತ್ತಾರು ಉತ್ಪನ್ನ ಖರೀದಿಸಿದರು.

ಎರಡುವರೆ ಸಾವಿರ ಮೌಲ್ಯದ ನಂದಿನಿ ಉತ್ಪನ್ನಗಳಾದ ಹಾಲು, ತುಪ್ಪ ಸಿಹಿ ಖರೀದಿ ಮಾಡಿ ಸ್ಥಳದಲ್ಲಿದ್ದವರಿಗೂ ಹಂಚಿದರು.

ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕರ್ನಾಟಕ ರಾಜ್ಯದ ರೈತರ ಬದುಕಿನ ಪ್ರಶ್ನೆ ಇದು ಎಂದು ಹೇಳಿದರು.

ಸುಮಾರು 70 ಲಕ್ಷ ರೈತರು ಹಾಲು ಉತ್ಪಾದನೆ ಮಾಡಿ ನಂದಿನಿಗೆ ಹಾಕುತ್ತಿದ್ದಾರೆ,

ರೈತರು ಕಟ್ಟಿದಂತಹ ನಂದಿನಿ ಹಾಲಿಗೆ ಬರಿ‌ 27, 28 ರೂಪಾಯಿ ದುಡ್ಡು ಕೊಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಐದು ರೂ ಹೆಚ್ಚು ಕೊಡುತ್ತಿತ್ತು ಎಂದು ತಿಳಿಸಿದರು.

ಗುಜರಾತ್‌ನ ಅಮೂಲ್ ರೈತರದ್ದು ಅದಕ್ಕೆ ನಮ್ಮದೇನು ತಕರಾರೇನಿಲ್ಲ. ಆದರೆ ನಮ್ಮನ್ನು ಹಿಂದೆ ತಡೆದು ಅವರನ್ನು ಮುಂದಕ್ಕೆ ಇಟ್ಟು ಸರ್ಕಾರ ಪ್ರೋತ್ಸಾಹ ಮಾಡುತ್ತಿದೆಯಲ್ಲಾ ಅದು ಸರಿಯಲ್ಲ ಎಂದು ಅಸಮಾಧಾನ ಪಟ್ಟರು.

ರೈತರಿಗೆ ಹಾಲು ಉತ್ಪಾದನೆ ಮಾಡಲು ಸರ್ಕಾರ ಸಹಾಯ ಮಾಡಲಿಲ್ಲ ಇದರ ಮಧ್ಯೆ ನಮ್ಮ ಹಾಲನ್ನು ನಾವು ಮಾರಲು ಆಗದಂತ ಪರಿಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾವೇ ಪ್ರೋತ್ಸಾಹ ಕೊಟ್ಟು ಹಾಲು ಉತ್ಪಾದನೆ ಮಾಡಲು ಹೊರಟಿದ್ದೇವೆ. ನಮ್ಮ ಹಾಲು, ಹಾಲಿನ ಉತ್ಪನ್ನಗಳು ಪೇಡ, ಬಿಸ್ಕೆಟ್, ಚಾಕ್‌ಲೇಟ್ ತೆಗೆದುಕೊಂಡಿದ್ದೇನೆ ಎಂದು ಹೇಳಿದರು.

ಪುನೀತ್ ರಾಜ್‍ಕುಮಾರ್‌ಗೆ ಮುತ್ತು ಕೊಟ್ರಿ ಇದು ಸುಳ್ಳಾ, ನಾಟಕನಾ ಇನ್ನೊಂದು ತಿಂಗಳು ಇರ್ತಿರಾ ಆಮೇಲೆ ಎಲ್ಲಾ ಕ್ಲೋಸ್. ಅಂತಾದ್ದರಲ್ಲಿ ಯಾಕ್ರಿ ನಮ್ಮ ರೈತರಿಗೆ ಅವಮಾನ ಮಾಡ್ತಿದ್ದೀರಿ ಎಂದು ಕಟುವಾಗಿ ನುಡಿದರು.

ರಾಜ್‌ಕುಮಾರ್, ಪುನೀತ್ ರಾಜ್‍ಕುಮಾರ್ ತರಹ ನಮ್ಮ ಮಕ್ಕಳು, ನಮ್ಮ ನಂದಿನಿ ಹಾಲು ಕುಡಿಬೇಕು ಅಂತ ನಮ್ಮ ಜನರಿಗೆ ಹೇಳಿದ್ದೀನಿ ನಾನು ಯಾರ ಬಗ್ಗೆನೂ ಪ್ರತಿಭಟನೆ ಮಾಡ್ತಿಲ್ಲ ಎಂದರು.

ಅಮೂಲ್ ಇರಲಿ ಬೇರೆ ಬೇರೆ ಕಡೆ ಇದೆ, ಮೊದಲು ನಿಮ್ಮ ಮನೆಯ ರೈತರನ್ನು ಉಳಿಸಿಕೊಳ್ಳಿ ಎಂದು ಸಲಹೆ ನೀಡಿದರು