ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ ಒಲಿಯಲಿದೆಯೊ

ಮೈಸೂರು: ಅಳೆದು ತೂಗಿ 189 ಮಂದಿ ಅಭ್ಯರ್ಥಿಗಳುಳ್ಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ,ಅದೇಕೋ ಏನೋ ಮೈಸೂರಿನ ಕೃಷ್ಣರಾಜ ಕ್ಷೇತ್ರಕ್ಕೆ  ಯಾರ ಹೆಸರನ್ನು ಬಿಡುಗಡೆಗೊಳಿಸಿಲ್ಲ.

ಇದು ತೀವ್ರ ಕುತೂಹಲಕ್ಕೆ‌ ಎಡೆ ಮಾಡಿರುವುದಲ್ಲದೆ ಗುಸು,ಗುಸು ಕೂಡಾ ನಡೆದಿದೆ.

ಈ ಬಾರಿ ಕೂಡಾ ಹಾಲಿ ಶಾಸಕ ಎಸ್. ಎ. ರಾಮದಾಸ್ ಅವರಿಗೆ ಟಿಕೆಟ್ ಖಚಿತ ಎನ್ನಲಾಗಿತ್ತು. ಆದರೆ ಬಿಜೆಪಿ ಹೈ ಕಮಾಂಡ್ ಕೆ ಆರ್ ಕ್ಷೇತ್ರಕ್ಕೆ ಯಾರ ಹೆಸರನ್ನು ಇನ್ನೂ ಆಖೈರುಗೊಳಿಸಿಲ್ಲ.ಇದು ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ.

ಕೃಷ್ಣರಾಜ ಕ್ಷೇತ್ರದ ಈ ಬಾರಿಯ ಟಿಕೆಟ್ ಗಾಗಿ ಮುಡಾ ಮಾಜಿ ಅಧ್ಯಕ್ಷ ಹೆಚ್. ವಿ. ರಾಜೀವ್ ತೀವ್ರ ಪೈಪೋಟಿ ನಡೆಸುತ್ತಿದ್ದರೆ,ಇತ್ತ ರಾಮದಾಸ್ ಅವರಿಗೆ ಅವರ ಸಮುದಾಯದವರೆ ಟಿಕಟ್ ನೀಡದಂತೆ ಆಗ್ರಹಿಸಿದ್ದಾರೆ.

ಮತ್ತೊಂದೆಡೆ ಹಲವು ಮತದಾರರು ರಾಮದಾಸ್ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಅವರಿಗೆ ಟಿಕೆಟ್ ನೀಡಬೇಡಿ ಎನ್ನುತ್ತಿದ್ದಾರೆ.

ಈ ಮಾಹಿತಿಗಳೆಲ್ಲ ಬಿಜೆಪಿ ಹೈ ಕಮಾಂಡ್ ಗೆ ತಲುಪಿದೆ. ಹಾಗಾಗಿ ಈ ಚುನಾವಣೆಯಲ್ಲಿ ರಾಮದಾಸ್ ಗೆ ಟಿಕೆಟ್ ನೀಡಬೇಕೊ ಬೇಡವೋ ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ.

ಕೆ. ಆರ್. ಕ್ಷೇತ್ರಕ್ಕೆ ಈ ಬಾರಿಯೂ ರಾಮದಾಸ್ ಗೆ ಟಿಕೆಟ್ ನೀಡಿದರೆ ಹೇಗೆ,ಅಥವಾ ರಾಜೀವ್ ಗೆ ನೀಡಿದರೆ ಏನಾಗಬಹುದು ಎಂಬೆಲ್ಲ ಲೆಕ್ಕಾಚಾರ  ಹಾಕುತ್ತಿದ್ದಾರೆ.

ಬಿಜೆಪಿ ವಲಯದಲ್ಲಿ ಕೆಲ ಮಂದಿ ಈ ಬಾರಿ ರಾಮದಾಸ್ ಹಾಗೂ ರಾಜೀವ್ ಅವರಿಬ್ಬರಿಗೂ ಟಿಕೆಟ್ ಬೇಡ ಹೊಸಬರಿಗೆ ಟಿಕೆಟ್ ನೀಡಿ ಎಂದು ಹೈ ಕಮಾಂಡ್ ಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಹಾಗಾಗಿ ಹೊಸಬರಿಗೆ ಟಿಕೆಟ್ ನೀಡಬಹುದೇ, ನೀಡುವುದಾದರೆ ಹೊಸಬರು ಯಾರು ಎಂಬ ಕುರಿತು ಈಗಾಗಲೇ ಚರ್ಚಿಸಿದ್ದಾರೆ ಎನ್ನಲಾಗಿದೆ.

ರಾಮದಾಸ್ ಹಾಗೂ ರಾಜೀವ್ ಇವರಿಬ್ಬರ ಟಿಕೆಟ್ ಶೀತಲ ಸಮರದಲ್ಲಿ ಮೂರನೇ ವ್ಯಕ್ತಿಗೆ ಅದೃಷ್ಟ ‌ಒಲಿಯಲುದೆಯೆ  ಎಂಬುದನ್ನು ಕಾದು ನೋಡಬೇಕಿದೆ.