ಬಿಜೆಪಿಗೆ ರಾಜೀನಾಮೆ ನೀಡುವೆ -ಶೆಟ್ಟರ್

ಹುಬ್ಬಳ್ಳಿ: ಬಿಜೆಪಿಯಲ್ಲಿ ನನ್ನ ಟಿಕೆಟ್ ವಿಚಾರದಲ್ಲಿ ಯಾವ ವಿಸ್ಮಯವೂ ನಡೆಯುವುದಿಲ್ಲ, ನಡೆದರೂ ಹಿಂದೆ ಹೋಗಲಾಗದಷ್ಟು ನಾನು ಮುಂದೆ ಹೆಜ್ಜೆ ಇಟ್ಟಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ಅವರು ಶಿರಸಿಗೆ ತರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.

ಟಿಕೆಟ್ ವಿಚಾರದಲ್ಲಿ ಕೊನೆ ಗಳಿಗೆಯ ವಿಸ್ಮಯ ನಡೆಯುವ ಯಾವ ವಿಶ್ವಾಸವೂ ಇಲ್ಲ, ರಾಜ್ಯದಲ್ಲಿ ಬಿಜೆಪಿ ಉಸ್ತುವಾರಿ ಹಾಗೂ ಚುನಾವಣೆ ಉಸ್ತುವಾರಿ ಪಕ್ಷವನ್ನು ಬಲಿ ಕೊಡಲು ನಿರ್ಧರಿಸಿದಂತಿದೆ ಎಂದು ಅಸಮಾಧಾನ ದಿಂದಲೇ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಜೆ.ಪಿ.ನಡ್ಡಾ ಅವರಿಗೆ ಇಲ್ಲಿನ ವಾಸ್ತವ ಚಿತ್ರಣ ನೀಡದೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಪಕ್ಷದ ಹಿತಾಸಕ್ತಿಗೆ ಧಕ್ಕೆ ತರುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಪಕ್ಷದಲ್ಲಿ ಶಿಸ್ತು, ಹಿರಿಯರಿಗೆ ಗೌರವ ಇಲ್ಲ ಎಂಬುದಕ್ಕೆ ಹಲವು ವಿದ್ಯಮಾನಗಳು ಸಾಕ್ಷಿ  ಎಂದರು.

ಶಿರಸಿಗೆ ತರಳಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುವೆ ಎಂದು ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದರು.

ನನ್ನ ಅಭಿಮಾನಿಗಳು ಹಾಗೂ ಪ್ರಮುಖರ ಸಭೆ ಕರೆದು ಚರ್ಚಿಸಿ ಮುಂದಿನ ನಿರ್ಧಾರ ತಿಳಿಸುವೆ, ಅವಕಾಶಗಳು ಮುಕ್ತವಾಗಿವೆ ಎಂದು ಹೇಳಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ ನಂತರವೂ ಪಕ್ಷದ ವರಿಷ್ಠರು, ಪ್ರಮುಖರು ಯಾರೊಬ್ಬರು ನನ್ನನ್ನು ಸಂಪರ್ಕಿಸಿಲ್ಲ ಎಂದು ತಿಳಿಸಿದರು.