ರಾಜ್ಯ ಬಿಜೆಪಿ ಕೆಲವು ವ್ಯಕ್ತಿಗಳ ಕಂಟ್ರೋಲ್​ ನಲ್ಲಿದೆ -ಶೆಟ್ಟರ್

ಬೆಂಗಳೂರು: ರಾಜ್ಯ ಬಿಜೆಪಿ ಕೆಲವು ವ್ಯಕ್ತಿಗಳ ಕಂಟ್ರೋಲ್ನಲ್ಲಿದೆ ಎಂದು ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಆರೋಪಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಶೆಟ್ಟರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಲಿಂಗಾಯತ ನಾಯಕರಲ್ಲಿ ಬಿ.ಎಸ್ಯಡಿಯೂರಪ್ಪ ಬಿಟ್ಟರೆ ನಾನೇ ಹಿರಿಯ, ಬಿಜೆಪಿಯಲ್ಲಿ ವ್ಯವಸ್ಥಿತವಾಗಿ ಸಂಚು ನಡೆಸಿ ನನಗೆ ಬಾರಿ ಚುನಾವಣೆಗೆ ಟಿಕೆಟ್ ನಿರಾಕರಿಸಲಾಗಿದೆ ಎಂದು ಬೇಸರದಿಂದಲೇ ಹೇಳಿದರು.

ಕರ್ನಾಟಕದ ಕೆಲವು ನಾಯಕರಿಂದ ನನಗೆ ತೊಂದರೆಯಾಗಿದೆ, ಅವಮಾನವಾಗಿದೆ. ರಾಜ್ಯ ಬಿಜೆಪಿಯಲ್ಲಿ ಪರಿಸ್ಥಿತಿ ಸರಿಯಿಲ್ಲ, ಪಕ್ಷದಲ್ಲಿ ನನ್ನನ್ನು ನಡೆಸಿಕೊಂಡ ರೀತಿಯಿಂದ ಬೇಸತ್ತು ಹೊರಬಂದು ಸಂತೋಷ, ಸಮಾಧಾನದಿಂದ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿಕೊಂಡು ಸಂತಸದಿಂದಲೇ ಸೇರ್ಪಡೆಯಾಗಿದ್ದೇನೆ ಎಂದು ಶೆಟ್ಟರ್ ಹೇಳಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಯನ್ನು  ಕಟ್ಟಿ ಬೆಳೆಸಿದವರಲ್ಲಿ ನಾನು ಪ್ರಮುಖ. ನಾನು ಕೂಡಾ ಜನಸಂಘ, ಸಂಘ ಪರಿವಾರದಿಂದ ಬಂದ ವ್ಯಕ್ತಿ, ಬಿಜೆಪಿಗಾಗಿ ಹಗಲಿರುಳು ದುಡಿದಿದ್ದೇವೆ ಎಂದು ತಿಳಿಸಿದರು.

ನಾನುಯಾಕೆ ಕಾಂಗ್ರೆಸ್ ಸೇರಿದೆ ಎಂಬ ಬಗ್ಗೆ ಬಹಳ ಚರ್ಚೆ ನಡೆಯುತ್ತಿದೆ. ಬಹಳಷ್ಟು ಜನರಿಗೆ ಅಶ್ಚರ್ಯ ಆಗಿದೆ,ಆದರೆ ಹಲವಾರು ತಿಂಗಳ ಹಿಂದೆ ಹಿರಿಯ ನಾಯಕನಾಗಿ ನನಗೆ ಏನು ವೇದನೆ ಆಗಿದೆ ಎಂಬುದು ಯಾರ ಗಮನಕ್ಕೂ ಬರಲಿಲ್ಲ ಎಂದು ಎಂದು ಬೇಸರದಲ್ಲೇ ಹೇಳಿದರು.

ನಾನು ಬಿ.ಎಸ್​.  ಯಡಿಯೂರಪ್ಪ, ದಿವಂಗತ ಅನಂತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದೇನೆ. ಬಿಜೆಪಿ ಎಲ್ಲ ರೀತಿ ಗೌರವ ಸ್ಥಾನಮಾನ ನೀಡಿದೆ. ಅದಕ್ಕೆ ಪ್ರತಿಯಾಗಿ ನಾನೂ ಬಿಜೆಪಿ ಕಟ್ಟಿ ಬೆಳೆಸುವ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.

ಆರು ಬಾರಿ ಸ್ಪರ್ಧೆ ಮಾಡಿದ್ದೇನೆ, ಇದು ಏಳನೇ ಬಾರಿ ನಾನು ಸ್ಪರ್ಧೆ ಮಾಡಬೇಕಾಗಿದೆ. ಸಹಜವಾಗಿ ಟಿಕೇಟ್ ಇಲ್ಲ ಅಂದಾಗ ಆಘಾತ ಆಯ್ತು, ವೇದನೆ ಆಯ್ತು. ಹಿರಿಯ ನಾಯಕನಾಗಿ ನನಗೆ ಗೌರವ ಕೊಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಅಧಿಕಾರದ ಆಸೆಗಾಗಿ ಬಿಜೆಪಿಯನ್ನು ತೊರೆದಿಲ್ಲ, ಕೆಲ ತಿಂಗಳ ಹಿಂದೆ ಸಾಮಾನ್ಯ ಕಾರ್ಯಕರ್ತನಿಗೆ, ಚಿಕ್ಕ ಹುಡುಗನಿಗೆ ಹೇಳುವ ರೀತಿಯಲ್ಲಿ ನಿಮಗೆ ಮತ್ತು ಈಶ್ವರಪ್ಪಗೆ ಟಿಕೆಟ್ ಇಲ್ಲ ಎಂದು ಹೇಳಿದರು.

ಟಿಕೆಟ್ಇಲ್ಲ ಎಂದಾಗ ನನಗೆ ಆಘಾತವಾಯಿತು. ಕಳೆದ 6 ತಿಂಗಳಿನಿಂದ ನನ್ನನ್ನು ಕಡೆಗಣಿಸಿದ್ದರು, ಇಷ್ಟು ವರ್ಷಗಳಿಂದ ಪಕ್ಷದಲ್ಲಿದ್ದವರಿಗೆ ರೀತಿ ಹೇಳುವುದೇ ಎಂದು ಬೇಸರಪಟ್ಟರು.

ಕೊನೆಗೆ ಪಕ್ಷ ಬಿಡುತ್ತೇನೆಂದಾಗ ಕೇಂದ್ರದಲ್ಲಿ ಹುದ್ದೆ ನೀಡುತ್ತೇವೆ ಎಂದರು ಆಫರ್ ಕೊಟ್ಟರು, ಅದನ್ನು ಆರಂಭದಲ್ಲಿಯೇ ಹೇಳಬಹುದಾಗಿತ್ತಲ್ಲವೇ ಎಂದು ಜಗದೀಶ್ ಶೆಟ್ಟರ್ ಕೇಳಿದರು.

ರಾಜ್ಯ ಬಿಜೆಪಿ ಬೆಳವಣಿಗೆ ವರಿಷ್ಠರ ಗಮನಕ್ಕೆ ಬಂದಿಲ್ಲ ಅನ್ನಿಸುತ್ತದೆ.ನನಗೆ ಜೆಪಿ ನಡ್ಡಾ, ಅಮಿತ್ ಶಾ ಅವರ  ಸಮಸ್ಯೆಯಿಲ್ಲ, ಅವರನ್ನು ನಾನು ಆರೋಪಿಸುತ್ತಿಲ್ಲರಾಜ್ಯ ಬಿಜೆಪಿ ಕೆಲವೇ ಕೆಲವು ವ್ಯಕ್ತಿಗಳ  ಹಿಡಿತದಲ್ಲಿದೆ.

ಲಿಂಗಾಯತ ನಾಯಕರಲ್ಲಿ ಬಿಎಸ್ವೈ ಬಿಟ್ಟರೆ ನಾನೇ ಹಿರಿಯ. ಅದಕ್ಕಾಗಿ ನನ್ನನ್ನು ಪಕ್ಷದಿಂದ ಹೊರಹಾಕಿರಬೇಕು ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ಕಾಂಗ್ರೆಸ್ ಸದಸ್ಯತ್ವ ಸ್ಥಾನ ನೀಡಿ ಬಿ ಫಾರಂನ್ನು ಕೂಡ ಇದೇ ವೇಳೆ ಜಗದೀಶ್ ಶೆಟ್ಟರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನೀಡಿದರು.