ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಇದೇ 30ರಂದು ಸಂಜೆ ಮೈಸೂರಿಗೆ ಆಗಮಿಸಲಿದ್ದು, ಅವರನ್ನು ಮೈಸೂರು ಶೈಲಿಯಲ್ಲಿ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಗುವುದು ಎಂದು ಶಾಸಕ ಎಸ್. ಎ. ರಾಮದಾಸ್ ತಿಳಿಸಿದರು.
ಮೈಸೂರಿನ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಶಾಸಕರು ಮಾತನಾಡಿದರು.
ಮೈಸೂರಿನ ಸಂಪ್ರದಾಯದಂತೆ ನಾದ ಸ್ವರ, ಪೂರ್ಣಕುಂಭದೊಂದಿಗೆ ಪ್ರಧಾನಿ ಮೋದಿಯವರನ್ನ ಅದ್ದೂರಿಯಾಗಿ ಸ್ವಾಗತ ಮಾಡಲಾಗುತ್ತದೆ ಎಂದು ತಿಳಿಸಿದರು.
ಮೋದಿ ಅವರಿಗೆ ಮೈಸೂರು ಸಿಲ್ಕ್ ವಸ್ತ್ರ, ಮೈಸೂರು ವಿಳ್ಳೆದೆಲೆ, ಗೊಂಬೆ, ಗಂಧದ ಕಡ್ಡಿ ಸೇರಿದಂತೆ ಮೈಸೂರಿನ ಹಲವು ಪದಾರ್ಥಗಳನ್ನು ನೀಡಿ ಸ್ವಾಗತಿಸಲಾಗುವುದು ಎಂದು ಹೇಳಿದರು.
ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಪ್ರಧಾನಿ ಮೋದಿ ಮೈಸೂರಿನ ಗನ್ ಹೌಸ್ ಸರ್ಕಲ್ ನಿಂದ ರೋಡ್ ಶೋ ಆರಂಭಿಸಲಿದ್ದಾರೆ.
ಗನ್ ಹೌಸ್ ನಿಂದ ಪಾಠಶಾಲೆ, ಕೆ.ಆರ್ ಸರ್ಕಲ್, ಸಯ್ಯಾಜಿರಾವ್ ರಸ್ತೆ ಮೂಲಕ ಮಿಲೇನಿಯಂ ಸರ್ಕಲ್ ವರೆಗೂ ರೋಡ್ ಶೋ ನಡೆಯಲಿದೆ ಎಂದು ತಿಳಿಸಿದರು.
ಮಾರ್ಗ ಮಧ್ಯೆ ಮೋದಿಯವರ ಜೀವನದ ಯಶೋಗಾಥೆ ಸಾರುವ ಕಟೌಟ್ ಗಳನ್ನ ಅಳವಡಿಸಲಾಗುತ್ತದೆ.ಕೇವಲ ರೋಡ್ ಶೋ ಮಾಡಿ ಹೋಗುವಂತದ್ದಲ್ಲ. ಅವರು ನಡೆದು ಬಂದ ಹಾದಿಯನ್ನೂ ತೋರಿಸುವ ಪ್ರಯತ್ನ ನಡೆಯುತ್ತದೆ ಎಂದರು.
ಹಿರಿಯ ನಾಗರೀಕರು ಕೂಡ ಕುಳಿತು ನೋಡಲು ಕುರ್ಚಿಗಳ ವ್ಯವಸ್ಥೆ ಮಾಡಲಾಗುತ್ತದೆ. ಐದು ಸ್ಥಳಗಳಲ್ಲಿ ಸೀನಿಯರ್ ಸಿಟಿಜನ್ಸ್ ಕೂರಲು ವ್ಯವಸ್ಥೆ ಮಾಡಲಾಗುತ್ತದೆ.
ಒಟ್ಟು 4 ಕಿ.ಮೀ ರೋಡ್ ಶೋ ನಡೆಯಲಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದು ರಾಮದಾಸ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ, ಅಭ್ಯರ್ಥಿ ಶ್ರೀವತ್ಸ, ಮುಖಂಡರಾದ ರವಿಶಂಕರ್, ಯಶಸ್ವಿನಿ ಸೋಮಶೇಖರ್, ಹೆಚ್. ವಿ. ರಾಜೀವ್ ಉಪಸ್ಥಿತರಿದ್ದರು.