ಸಕಲೇಶಪುರ: ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ತಂದಿದ್ದಂತಹ ಯೋಜನೆಗಳಲ್ಲಿ ಜೆಡಿಎಸ್ ಆಗಲಿ ಬಿಜೆಪಿಯಾಗಲಿ ಒಂದೂ ಯೋಜನೆಯನ್ನೂ ಜಾರಿಗೆ ತರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದರು.
ಸಕಲೇಶಪುರ ದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಹಿರಂಗಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ಬಡವರಿಗೆ ನಿವೇಶನ, ಮನೆ ನೀಡಿದೆ. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಮಹಿಳೆಯರಿಗಾಗಿ ಸ್ತ್ರೀಶಕ್ತಿ ಸಂಘಗಳು, ಆಹಾರ ಭದ್ರತಾ ಕಾಯ್ದೆ, ಉದ್ಯೋಗ ಖಾತ್ರಿ ಯೋಜನೆ ನೀಡಿದೆ ಎಂದು ಹೇಳಿದರು.
ಇಂತಹ ಒಂದು ಯೋಜನೆ ಜೆಡಿಎಸ್ ಅಥವಾ ಬಿಜೆಪಿಯವರು ಕೊಟ್ಟಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬಡವರ ಹೊಟ್ಟೆ ತುಂಬಿಸಲು ಒಂದು ಸಣ್ಣ ಯೋಜನೆಯನ್ನು ನೀಡಿಲ್ಲ.
ಬೆಲೆ ಏರಿಕೆ ನಿಯಂತ್ರಣ ಮಾಡಲು, ವಿದ್ಯಾವಂತ ಯುವಕರಿಗೆ ಉದ್ಯೋಗ ನೀಡಲು, ಸಮಾಜದಲ್ಲಿ ಶಾಂತಿ ನಿರ್ಮಿಸಲು ಒಂದು ಯೋಜನೆಯನ್ನು ಕೊಟ್ಟಿಲ್ಲ ಎಂದು ದೂರಿದರು.
ಇದು ಮಲೆನಾಡು ಪ್ರದೇಶ. ಪ್ರವಾಸೋದ್ಯಮಕ್ಕೆ ಹೆಚ್ಚು ಪ್ರಸಿದ್ಧಿ ಪಡೆದಿರುವ ಪ್ರದೇಶ. ಇತ್ತೀಚೆಗೆ ರಾಜ್ಯದಲ್ಲಿ 10 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಲಿದೆ ಎಂದು ಸರ್ಕಾರ ಘೋಷಿಸಿತ್ತು.
ಇದರಲ್ಲಿ ಮಲೆನಾಡು ಭಾಗದಲ್ಲಿ ಎಷ್ಟು ಬಂಡವಾಳ ಹೂಡಿಕೆಯಾಗುತ್ತಿದೆ? ಈ ಭಾಗದಲ್ಲಿ 50 ಸಾವಿರ ಕೋಟಿ ಅಥವಾ 5 ಸಾವಿರ ಕೋಟಿಯಾದರೂ ಬಂಡವಾಳ ಹೂಡಿಕೆಯಾಗಿದೆಯಾ
ಮೋದಿ ಅವರು ಹೇಳಿದಂತೆ ನಿಮ್ಮ ಖಾತೆಗೆ 15 ಲಕ್ಷ ಹಾಕಿದರಾ ನಿಮಗೆ ಅಚ್ಛೇದಿನ ಬಂತಾ ರೈತರ ಆದಾಯ ಡಬಲ್ ಆಯಿತಾ ಎಂದು ಪ್ರಶ್ನಿಸಿದರು.
ರೈತರು ಬಳಸುವ ಗೊಬ್ಬರ, ಮೇವುಗಳ ಬೆಲೆ ಏರಿಕೆಯಾಗುತ್ತಿವೆ. ಅಡುಗೆ ಅನಿಲ, ಅಡುಗೆ ಎಣ್ಣೆ, ದಿನಸಿ ವಸ್ತುಗಳು ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದು ಡಿಕೆಶಿ ವಾಗ್ದಾಳಿ ನಡೆಸಿದರು.
ಸಕಲೇಶಪುರದ ಈ ಬಹಿರಂಗ ಸಭೆ ನೋಡುತ್ತಿದ್ದರೆ, ಕನಕಪುರದ ಬಹಿರಂಗ ಸಭೆಯಂತೆ ಕಾಣುತ್ತಿದೆ ಎಂದು ಬಣ್ಣಿಸಿದರು.
ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗ ಅಧಿಕಾರಕ್ಕೆ ಬಂದಂತೆ ಎಂದು ಹೇಳಿದರು.
ರಾಜ್ಯದಲ್ಲಿ ಯಾರೂ ಕತ್ತಲಲ್ಲಿ ಇರಬಾರದು, ಬೆಲೆ ಏರಿಕೆಯಿಂದ ಪರಿಹಾರ ಪಡೆಯಲು ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದರು