ಬೆಳಗಾವಿ: ಇನ್ನು ಕೆಲವೇ ದಿನಗಳಲ್ಲಿ ಬೆಳಗಾವಿ ಜಿಲ್ಲೆಯ ಸುಮಾರು 50ಕ್ಕೂ ಹೆಚ್ಚು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಿವಾಸಗಳ ಮೇಲೆ ಲೋಕಾಯುಕ್ತ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುವ ಮುನ್ಸೂಚನೆ ಸಿಕ್ಕಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಸ್ಪೋಟಕ ಮಾಹಿತಿ ಬಹಿರಂಗಪಡಿಸಿದರು.
ಬೆಳಗಾವಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ತಮ್ಮ ಮೇಲೆ ಲೋಕಾಯುಕ್ತ ಮತ್ತು ಐಟಿ ದಾಳಿ ನಡೆಯಲಿದೆ ಎಂಬುದಾಗಿ ಮುನ್ಸೂಚನೆ ನೀಡಿದರು.
ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನೂ 10 ದಿನ ಉಳಿದಿದೆ. ರಾಜ್ಯದಲ್ಲಿ ಈ ಸಲ ಕಾಂಗ್ರೆಸ್ ಪರವಾದ ವಾತಾವರಣ ಇದೆ. ರಾಜ್ಯದ ಮತದಾರರು ಕಾಂಗ್ರೆಸ್ ಸರ್ಕಾರ ರಚನೆ ಮಾಡಲು ತೀರ್ಮಾನ ಮಾಡಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ಜನ ಭರವಸೆ ಇಟ್ಟಿದ್ದಾರೆ. ಬಿಜೆಪಿ ಹತಾಶೆಯಿಂದ ವಾಮಮಾರ್ಗ ಹಿಡಿಯುವಂತ ಸುದ್ದಿ ತಲುಪಿದೆ ಎಂದು ದೂರಿದರು.
ಅಭ್ಯರ್ಥಿಗಳು ಮತ್ತು ಅವರ ಸಂಬಂಧಿಕರು ಸೇರಿ 50 ಜನರ ಮೇಲೆ ಲೋಕಾಯುಕ್ತ, ಐಟಿ ದಾಳಿ ಸಂಭವ ಇದೆ.ಇದರಿಂದಾಗಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗುತ್ತದೆ.
ಒಂದು, ಎರಡು ದಿನದಲ್ಲಿ ದಾಳಿಯಾಗುವ ಮೂನ್ಸುಚನೆ ಸಿಕ್ಕಿದೆ ಎಂದು ತಿಳಿಸಿದರು.
ವಾಮಮಾರ್ಗ ಕೈ ಬಿಟ್ಟು ಸತ್ಯ, ಧರ್ಮದ ಮೇಲೆ ಚುನಾವಣೆ ಆಗಬೇಕು. ರಾಜ್ಯದ ಕಾಂಗ್ರೆಸ್ ಪಕ್ಷದ ವಕ್ತಾರೆಯಾಗಿ ಸುದ್ದಿಗೋಷ್ಠಿ ಮಾಡುತ್ತಿದ್ದೇನೆ. 50 ಜನರಲ್ಲಿ ನನ್ನ ಹೆಸರು ಸಹ ಇದೆ ಎಂಬ ಮಾಹಿತಿ ಇದೆ ಎಂದು ಲಕ್ಮೀ ಹೆಬ್ಬಾಳ್ ಕರ್ ಹೇಳಿದರು.
ಜನರ ಭಾವನೆ ಕದಡಲು ಈ ರೀತಿ ಪ್ರಯತ್ನಿಸಲಾಗುತ್ತಿದೆ. 1 ಸಾವಿರ ಆದಾಯ ತೆರಿಗೆ ಅಧಿಕಾರಿಗಳು ಬಂದಿರುವ ಮಾಹಿತಿಯಿದೆ ಎಂದು ತಿಳಿಸಿದರು.