ಕೊಪ್ಪಳ: ರಾಜ್ಯದ ಜನರು ನೆರೆ, ಬರ ಮತ್ತತರ ಕಷ್ಟಗಳಲ್ಲಿದ್ದಾಗ ಬಾರದ ಪ್ರಧಾನಿ ಮೋದಿಯವರು ಚುನಾವಣೆ ವೇಳೆ ಬಂದು ರೋಡ್ ಶೋ ಮಾಡಿ ಕೈಬೀಸಿ ಹೋಗುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು,ಚುನಾವಣೆ ಬಂದಿದೆ. ಬಿಜೆಪಿಯ ದೆಹಲಿ ನಾಯಕರು ರಾಜ್ಯಕ್ಕೆ ಲಗ್ಗೆ ಇಡುತ್ತಿದ್ದಾರೆ. ರಾಜ್ಯದ ಜನ ಸಂಕಷ್ಟದಲ್ಲಿದ್ದಾಗ ಬರಬೇಕಾಗಿತ್ತು ಎಂದು ವಾಗ್ದಾಳಿ ನಡೆಸಿದರು.
ಕಲ್ಯಾಣಕ ಕರ್ನಾಟಕಕ್ಕೆ ಬಿಜೆಪಿಯ ಕೊಡುಗೆ ಏನು, ಕೃಷ್ಣಾ ನ್ಯಾಯಧಿಕರಣದ ತೀರ್ಪು ಬಂದು ಹತ್ತು ವರ್ಷ ಆಯಿತು. ಈ ಭಾಗಕ್ಕೆ, ಮುಖ್ಯವಾಗಿ ನೀರಾವರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಏನು ಮಾಡಿವೆ ಎಂದು ಪ್ರಶ್ನಿಸಿದರು.
ಜೆಡಿಎಸ್, ಕಾಂಗ್ರೆಸ್ ರೈತರಿಗೆ ಅನ್ಯಾಯ ಮಾಡಿವೆ ಅಂತಾರೆ ಮೋದಿ ಅವರು. ಹಾಗಾದರೆ, ಅವರು ರೈತರಿಗೆ ಎನ್ ಮಾಡಿದ್ದಾರೆ ಎಂದು ಹೇಳಬೇಕಲ್ಲವೆ.
ಅವರ ಫಸಲ್ ಭಿಮಾ ಯೋಜನೆಯ ಪ್ರೀಮಿಯಂ ಹಣವನ್ನೆ ಕೊಡಲಿಲ್ಲ. ಆ ಯೋಜನೆ ಮೋಸದ ಬಗ್ಗೆ ಇಡೀ ದೇಶದ ಉದ್ದಗಲಕ್ಕೂ ಚರ್ಚೆ ಆಗ್ತಿದೆ. ಇದಕ್ಕೆ ಮೋದಿ ಉತ್ತರ ಏನು ಎಂದು ಎಚ್ ಡಿ ಕೆ ಕುಟುಕಿದರು.
ಇಷ್ಟು ದಿನ ಏನನ್ನೂ ಮಾಡದವರು ಈಗ ಬಂದು ನಲ್ಲಿಯಲ್ಲಿ ನೀರು ಕೊಡುತ್ತೀವಿ ಅಂತ ಮೋದಿ ಹೇಳುತ್ತಿದ್ದಾರೆ. ಯಾವ ಗ್ರಾಮದಲ್ಲಿ ಜಲ್ ಜೀವನ್ ಮಿಷನ್ ಯಶಸ್ವಿಯಾಗಿದೆ? ಹಣ ಕೆಲವರ ಕಿಸಿಗೆ ಹರಿದಿದೆಯೇ ಹೊರತು ನೀರು ಹರಿದಿಲ್ಲ ಎಂದು ಕಿಡಿಕಾರಿದರು.
ಇದರಲ್ಲಿ ಸಂಬಂಧ ಪಟ್ಟ ಮಂತ್ರಿಗಳು ಸಂಪದ್ಭರತರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ನಿಷೇಧ ಮಾಡಲಾಗುವುದು ಎಂದು ಘೋಷಣೆ ಮಾಡಿದೆ. ಬ್ಯಾನ್ ಮಾಡಿದರೆ ಸಮಸ್ಯೆಗೆ ಪರಿಹಾರ ಸಿಗುತ್ತಾ, ಎರಡೂ ಪಕ್ಷಗಳು ಈ ಬಗ್ಗೆ ಯೋಚನೆ ಮಾಡಬೇಕು ಎಂದು ಕುಮಾರಸ್ವಾಮಿ ಹೇಳಿದರು.
ಬಜರಂಗದಳದಲ್ಲಿ ಅಮಯಾಕರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅವರ ಮನಸ್ಸು ಕೆಡಿಸಿ ಹಾಳು ಮಾಡಲಾಗುತ್ತಿದೆ. ಅವರ ತಲೆಯಲ್ಲಿ ಏನೆನೋ ತುಂಬಿ ಅವರನ್ನ ಹಾಳು ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಮೋದಿಯವರು ನಮ್ಮನ್ನು ಟೀಕೆ ಮಾಡುತ್ತಿದ್ದಾರೆ. ನಮಗೆ ಸಿದ್ದಾಂತ ಇಲ್ಲ ಎನ್ನುತ್ತಿದ್ದಾರೆ. ನಾವು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೆ ಸಿದ್ದಾಂತ ಸರಿಯಾಗುತ್ತದಾ ಕಾಂಗ್ರೆಸ್ ಜತೆ ಹೊದರೆ ಸೈದ್ದಾಂತಿಕತೆ ಸರಿ ಇರಲ್ವಾ ಎಂದು ತಿರುಗೇಟು ನೀಡಿದರು.
ರಾಜ್ಯದಲ್ಲಿ ಮೋದಿ ಪ್ರಚಾರದಿಂದ ನಮಗೆ ಜೋಶ್ ಬಂದಿದೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಅವರು ಹಾಗೇ ಹೇಳಲೇಬೇಕು. ಅವರಿಗೆ ಬೇರೆ ಗತಿಯಲ್ಲ, ಮೋದಿ ಮುಖ ತೊರಿಸಿ ವೋಟ್ ಕೇಳ್ತಿದ್ದಾರೆ.
ಈ ಭಾರಿ ನಂಜನಗೂಡು, ಗುಂಡ್ಲಪೇಟೆ, ಮಡಿಕೇರಿಯಲ್ಲಿ ಕೂಡ ಬಿಜೆಪಿ ಗೆಲ್ಲಲ್ಲ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಮ್ಮ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ನಾವು ಗೆದ್ದೆತ್ತಿನ ಬಾಲ ಹಿಡಿತೀವಿ ಅಂದಿದಾರೆ.
ಹಾಗಾದರೆ ಸಿದ್ದರಾಮಯ್ಯ ಯಾಕೆ ಸೋತೆತ್ತಿನ ಬಾಲ ಹಿಡಿದುಕೊಂಡು ಬರ್ತಾರೆ? ಎಂದು ಪ್ರಶ್ನಿಸಿದರು ಎಚ್ ಡಿ ಕೆ.