ವಿಜೃಂಭಣೆಯಿಂದ ಜರುಗಿದ ಬಿಳಿಗಿರಿ ರಂಗನಾಥಸ್ವಾಮಿ ಮಹಾರಥೋತ್ಸವ

(ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ)

ಚಾಮರಾಜನಗರ: ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಬಿಳಿಗಿರಿರಂಗನಾಥಸ್ವಾಮಿ ಮಹಾರಥೋತ್ಸವ (ದೊಡ್ಡ ಜಾತ್ರೆ) ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ  ಜರುಗಿತು.

ರಥೋತ್ಸವ ಹಿನ್ನೆಲೆಯಲ್ಲಿ ಏ.27 ರಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.

ರಥೋತ್ಸವದ ಪ್ರಯುಕ್ತ ಗುರುವಾರ ಬೆಳಗ್ಗೆ 5 ಗಂಟೆಗೆ ಕಲ್ಯಾಣೋತ್ಸವ,1 ಗಂಟೆಗೆ  ಮಂಟಪೋತ್ಸವಗಳು ಜರುಗಿತು.

ಮಧ್ಯಾಹ್ನ 12.10 ಗಂಟೆ ಮೇಲೆ 12.24 ಗಂಟೆಯೊಳಗೆ ಸಲ್ಲುವ ಶುಭ ಕರ್ಕಾಟಕ ಲಗ್ನದ ಧನುರ್ಗುರು ನಾವಾಂಶ ಶುಭ ಮುಹೂರ್ತದಲ್ಲಿ ಡೋಲಾಯ ಮಾನಂ ಗೋವಿಂದಂ, ಮಂಚಸ್ಥಂ ಮಧುಸೂದನಂರಥಸ್ಥಂ ಕೇಶವಂ ದೃಷ್ಟಾ ಪುನರ್ಜನ್ಮ ನವಿದ್ಯತೆ ಎಂಬ ಮರ್ಯಾದೆಯಲ್ಲಿ ರಥಾರೋಹಣ ನಂತರ ಮಹಾರಥೋತ್ಸವ ಜರುಗಿತು.

ರಥಕ್ಕೆ ಚಾಲನೆ ಕೊಡುತ್ತಿದ್ದಂತೆ ಉಘೇ,ಉಘೇ ರಂಗಪ್ಪ.. ಉಫ್ ರಂಗಪ್ಪ ಎಂಬ ಹರ್ಷೋದ್ಗಾರ ಮೊಳಗಿತು.

ಜಾತ್ರೆಗೆ ತೆರಳುವ ಭಕ್ತರಿಗೆ ಪಟ್ಟಣದಿಂದ ಬೆಟ್ಟಕ್ಕೆ 80 ಕ್ಕೂ ಹೆಚ್ಚು ಸಾರಿಗೆ ಬಸ್‌ ವ್ಯವಸ್ಥೆ ಮಾಡಲಾಗಿತ್ತು.

ಅಲ್ಲದೇ ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆಯಿಂದ ಸಾರಿಗೆ ಬಸ್‌ ವ್ಯವಸ್ಥೆ ಕಲ್ಪಿಸಲಾಗಿತ್ತು.

ಬೆಟ್ಟದಲ್ಲಿ ಭಕ್ತರಿಗೆ ಟ್ಯಾಂಕ್‌ಗಳ ಮೂಲಕ ಕುಡಿಯುವ ನೀರು ಒದಗಿಸಲಾಗಿತ್ತು.

ಸೋಲಿಗರ ಸಂಭ್ರಮ: ದೊಡ್ಡಜಾತ್ರೆ ಹಿನ್ನೆಲೆಯಲ್ಲಿ ಬಿಳಿಗಿರಿರಂಗನಬೆಟ್ಟದ ವಿವಿಧ ಪೋಡುಗಳಿಂದ ಸೋಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಥೋತ್ಸವವನ್ನು ಕಣ್ತುಂಬಿಕೊಂಡರು.

ಭಕ್ತರು ಬಿಲ್ಡಿಂಗ್ ಗಳ ಮೇಲೆ ನಿಂತು ರಥೋತ್ಸವ ನೋಡಿ ಆನಂದಿಸಿದರು.

ಬಿಳಿಗಿರಿರಂಗನಬೆಟ್ಟದ ಪುರಾಣಿಮೋಡು, ಮಂಜಿಗುಡ್ಡೆ, ಬಂಗ್ಲಡು, ಗೊಂಬೆಗಲ್ಲು, ದೊಡ್ಡಸಂಪಿಗೆ ಇತರೆ ಹಾಡಿಯ ಸೋಲಿಗರು ರಂಗಪ್ಪನ ತೇರು ನೋಡಲು ಪರಿವಾರ ಸಮೇತ ಕಾಲುದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ತೇರಿಗೆ ನವ ವಿವಾಹಿತರು ಹಣ್ಣು ಧವನ ಅರ್ಪಿಸಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.

ರೈತರು ಬೆಳೆದ ರಾಗಿ, ಭತ್ತ, ಜೋಳ, ಕಬ್ಬು, ಅವರೆ,ಅಲಸಂದೆ, ಹುರಳಿ, ಹೆಸರು, ನವಣೆ ಇತರೆ ಧಾನ್ಯಗಳನ್ನು ರಥಕ್ಕೆ ಸಲ್ಲಿಸಿ ಹರಕೆ ತೀರಿಸಿದರು.

ಹಳ್ಳಿಗಳಿಂದ ಬಂದಿದ್ದ ಭಕ್ತರು ಅಕ್ಕಿ, ಬೆಲ್ಲ,ಕಾಯಿ, ಹಸಿಕಟ್ಟೆಯನ್ನು ನೀರಿನಲ್ಲಿ ನೆನೆಸಿ ಜತೆಗೆ ಕಜ್ಜಾಯ ಬೆರೆಸಿ (ಬ್ಯಾಟಿಮಣೆ) ಪ್ರಸಾದವಾಗಿ ನೀಡಿದರು.

ಯಾವುದೇ‌ ಅಹಿತ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.