ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯೇ ಬೋಗಸ್; ಕೋಟೆ ಶಿವಣ್ಣ ಆರೋಪ

ಮೈಸೂರು:  ಕಾಂಗ್ರೆಸ್ ಪಕ್ಷ  ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ  25,000 ಮಂದಿ ಪೌರಕಾರ್ಮಿಕರನ್ನು ಕಾಯಂ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿರುವುದು ಶುದ್ಧ ಸುಳ್ಳು ಎಂದು ರಾಜ್ಯ ಸಫಾಯಿ ಕರ್ಮಚಾರಿ  ಆಯೋಗದ ಅಧ್ಯಕ್ಷ ಕೋಟೆ ಎಂ. ಶಿವಣ್ಣ ಆರೋಪಿಸಿದರು.

ಗುರುವಾರ ಮೈಸೂರಿನ ವಾಣಿವಿಲಾಸ ರಸ್ತೆಯಲ್ಲಿರುವ ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆಯೇ ಬೋಗಸ್ ಆಗಿದೆ. ಪೌರಕಾರ್ಮಿಕರ ಬಗ್ಗೆ ನೀಡಿರುವ ಭರವಸೆಗಳೆಲ್ಲ ಹಸಿ ಸುಳ್ಳಿನಿಂದ ಕೂಡಿದೆ ಎಂದು ‌ಹೇಳಿದರು.

ಭರವಸೆಯನ್ನು ನೀಡುವ ಮೊದಲು ವಸ್ತು ಸ್ಥಿತಿಯನ್ನು ತಿಳಿದುಕೊಂಡಿಲ್ಲ, ಯಾರೋ ಹೇಳಿದ್ದನ್ನೇ ನಂಬಿ, ಪೌರಕಾರ್ಮಿಕರಿಗೆ ಸುಳ್ಳು ಭರವಸೆಯನ್ನು ನೀಡಿದ್ದಾರೆ. ಹಾಗಾಗಿ ಕಾಂಗ್ರೆಸ್ ನವರ ಪ್ರಣಾಳಿಕೆ ಹಾಗೂ ಗ್ಯಾರಂಟಿ ಭರವಸೆ ಗಳು ಸುಳ್ಳಿನಿಂದ ಕೂಡಿದೆ

ಎಂದು ಆರೋಪಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ, ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪೌರಕಾರ್ಮಿಕರನ್ನು ಕಾಯಂಗೊಳಿಸಲು ದಿಟ್ಟ ನಿರ್ಧಾರವನ್ನು ಕೈಗೊಂಡಿತ್ತು.

ಹಾಗಾಗಿ ನೇರ ಪಾವತಿಯಡಿ ಕಾರ್ಯನಿರ್ವಹಿಸುತ್ತಿದ್ದ ಪೌರಕಾರ್ಮಿಕರಲ್ಲಿ ಮೊದಲ ಹಂತದಲ್ಲಿ 11,133 ಮಂದಿ ಪೌರಕಾರ್ಮಿಕರನ್ನು ಖಾಯಂ ಮಾಡಿದೆ.

ಎರಡನೇ ಹಂತದಲ್ಲಿ 12,300 ಮಂದಿ ಪೌರಕಾರ್ಮಿಕರ ಕೆಲಸವನ್ನು ಖಾಯಂ ಮಾಡಿದೆ. ಮೂರನೇ ಹಂತದಲ್ಲಿ ಬಾಕಿ ಇರುವ ಎಲ್ಲಾ ಪೌರ ಕಾರ್ಮಿಕರ ಕೆಲಸವನ್ನು ಖಾಯಂ ಮಾಡಲು ಸರ್ಕಾರ ಆದೇಶ ಹೊರಡಿಸಿದೆ ಎಂದು ತಿಳಿಸಿದರು.

ಅಲ್ಲದೇ ಪೌರ ಕಾರ್ಮಿಕರನ್ನು ಪೌರ ನೌಕರರು, ಸರ್ಕಾರದ ನೌಕರರು ಎಂದು ಆದೇಶ ಹೊರಡಿಸಿದೆ. 

ಅಲ್ಲದೆ ಬೆಂಗಳೂರು ಬಿಬಿಎಂಪಿಯಲ್ಲಿ 15,000 ಪೌರ ಕಾರ್ಮಿಕರ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಲು ಆದೇಶ ಹೊರಡಿಸಲಾಗಿದೆ.

ಪೌರಕಾರ್ಮಿಕರಿಗೆ 2000 ರೂ ಸಂಕಷ್ಟ ಭತ್ಯೆಯನ್ನು ನೀಡುವ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಾರಿಗೊಳಿಸಿದ್ದಾರೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆ ಗಳನ್ನು ವಿವರಿಸಿದರು.

ಎಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿಯಾದ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು, ಯಾರದೋ ಮಾತನ್ನು ಕೇಳಿ ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿರುವ 25,000 ಮಂದಿ ಪೌರಕಾರ್ಮಿಕರನ್ನು ಕಾಯಂ ಮಾಡುವುದಾಗಿ,ಹಾಗೂ ಜೀವ ವಿಮೆ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ.

ಆದರೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಎಲ್ಲಾ 53,000 ಮಂದಿ ಪೌರಕಾರ್ಮಿಕರನ್ನು ಕಾಯಂ ಗೊಳಿಸಿರುವುದರಿಂದ, ಕಾಂಗ್ರೆಸ್ ನವರು ಯಾವ ಪೌರಕಾರ್ಮಿಕರನ್ನು ಕಾಯಂ ಮಾಡುತ್ತಾರೆ ಎಂದು ಕೋಟೆ ಎಂ.ಶಿವಣ್ಣ ಪ್ರಶ್ನಿಸಿದರು.ಸುದ್ದಿಗೋಷ್ಠಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಯಶಸ್ವಿ ಸೋಮಶೇಖರ್, ಮೈಸೂರು ಮೇಯರ್ ಶಿವಕುಮಾರ್, ಬಿಜೆಪಿ ಜಿಲ್ಲಾ ಸಹ ವಕ್ತಾರ ಡಾ.ಕೆ.ವಸಂತಕುಮಾರ್, ಬಿಜೆಪಿ ಮೈಸೂರು ವಿಭಾಗದ ಮಾಧ್ಯಮ ಸಂಯೋಜಕ ನಾಗೇಶ್, ಜಿಲ್ಲಾ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಮತ್ತಿತರರು ಉಪಸ್ಥಿತರಿದ್ದರು.