ಮೈಸೂರು: ಯುವ, ಸಖಿ, ವಿಶೇಷಚೇತನ, ಮಾದರಿ ಹಾಗೂ ಸಾಂಪ್ರದಾಯಿಕ ಮತಗಟ್ಟೆಗಳು ಈ ಬಾರಿ ನಾನಾ ರೀತಿಯಲ್ಲಿ ಮತದಾರರ ಕೈ ಬಿಸಿ ಕರೆಯಲಿವೆ.
ಹೌದು ಜಿಲ್ಲಾ ಸ್ವೀಪ್ ಸಮಿತಿ ನೇತೃತ್ವದಲ್ಲಿ ಜಿಲ್ಲೆಯ ಗ್ರಾಮೀಣ ಭಾಗದ 8 ಕ್ಷೇತ್ರಗಳಲ್ಲಿ ಬರುವ 2114 ಮತಗಟ್ಟೆಗಳ ಪೈಕಿ 68 ಮತಗಟ್ಟೆಗಳು ಈ ಬಾರಿ ನಾನಾ ರೀತಿಯಲ್ಲಿ ಕಂಗೊಳಿಸಲಿವೆ. 38 ಸಖಿ ಬೂತ್ , 7 ವಿಶೇಷೇಚೇತನರ ಮತಗಟ್ಟೆ , 7 ಮಾದರಿ ಮತಗಟ್ಟೆ, 7 ಯುವಕರ ಮತಗಟ್ಟೆ ಮತ್ತು 9 ಸಾಂಪ್ರದಾಯಿಕ ಮತಗಟ್ಟೆಗಳನ್ನು ರೂಪಿಸಲಾಗಿದೆ. ಒಂದೊಂದು ಮತಗಟ್ಟೆಗಳು ನಾನಾ ವಿಧಗಳಲ್ಲಿ ಜನಾಕರ್ಷಿಸಲಿವೆ.
ವಿಶೇಷಚೇತನರು ಸಹ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅನುಕೂಲವಾಗುವಂತೆ ಹಾಗೂ ಅವರಲ್ಲೂ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ 8 ಕ್ಷೇತ್ರದಲ್ಲಿ 7 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ವಿವಿಧ ಬಣ್ಣಗಳಿಂದ ಅವರಿಗೆ ತಿಳಿಯುವಂತೆ ವೀಲ್ಚೇರ್, ಸನ್ನೆಯ ಚಿತ್ತಾರ ಹಾಗೂ ಮತದಾನ ಮಾಡುವ ಚಿತ್ರಗಳನ್ನು ಬರೆದು ಮತಗಟ್ಟೆಯನ್ನು ಅಲಂಕರಿಸಲಾಗಿದೆ. ಹುಣಸೂರಿನ ಧರ್ಮಪುರದ ಸರ್ಕಾರಿ ಪ್ರೌಢಶಾಲೆ, ತಿ.ನರಸೀಪುರ ವ್ಯಾಪ್ತಿಯ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಮತಗಟ್ಟೆ, ಪಿರಿಯಾಪಟ್ಟಣ ಬೈಲುಕುಪ್ಪೆಯ ಜಿಎಚ್‌ಪಿಎಸ್ ಶಾಲೆ, ನಂಜನಗೂಡಿನ ಸರ್ಕಾರಿ ಪದವಿ ಪೂರ್ವ ಕಾಲೇಜು, ಮೈಸೂರಿನ ತಾಲ್ಲೂಕಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿರುವ ಶೆಟ್ಟನಾಯಕನ ಹಳ್ಳಿಯ ಸರ್ಕಾರಿ ಪ್ರೌಢಶಾಲೆ, ಕೆ.ಆರ್.ನಗರ ತಾಲ್ಲೂಕಿನ ಹೆಬ್ಬಾಳು ಗ್ರಾ.ಪಂ ಕಚೇರಿ, ಎಚ್.ಡಿ.ಕೋಟೆಯ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ವಿಶೇಷಚೇತನರಿಗಾಗಿ ವಿಶೇಷ ಮತಗಟ್ಟೆ ತೆರೆಯಲಾಗಿದೆ.
ಪ್ರಜಾಪ್ರಭುತ್ವದ ಹಬ್ಬ ಎನಿಸಿದ ಚುನಾವಣಾ ಮತದಾನದ ಪ್ರಕ್ರಿಯೆಯಲ್ಲಿ ಮೊಟ್ಟ ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸುವ ಯುವ ಮತದಾರರ ಸೆಳೆಯಲು ಯುವ ಮತಗಟ್ಟೆಗಳನ್ನು ತೆರೆಯಲಾಗಿದೆ. ಮೈಸೂರು ತಾಲ್ಲೂಕಿನ ಉದ್ಬೂರು ಗ್ರಾಪಂನ ಸ.ಹಿ.ಪ್ರಾ. ಶಾಲೆ, ಹುಣಸೂರು ಪಟ್ಟಣದ ಕರಿಗೌಡನ ಬೀದಿಯ ಸ.ಹಿ.ಪ್ರಾ.ಶಾಲೆ, ನಂಜನಗೂಡಿನ ದೇವಿರಮ್ಮನಹಳ್ಳಿ ಪಾಳ್ಯದ ಸ.ಹಿ.ಪ್ರಾ.ಶಾಲೆ, ತಿ.ನರಸೀಪುರದ ಕಲಿಯೂರು ಗ್ರಾಮದ ಸ.ಹಿ.ಪ್ರಾ.ಶಾಲೆ, ಕೆ.ಆರ್.ನಗರ ತಾಲ್ಲೂಕಿನ ಕಂಚಿನಕೆರೆ ಸ.ಹಿ.ಪ್ರಾ.ಶಾಲೆ, ಎಚ್.ಡಿ.ಕೋಟೆ ಪಟ್ಟಣದ ಸ.ಹಿ.ಪ್ರಾ.ಬಾಲಕಿಯರ ಶಾಲೆ ಮತಗಟ್ಟೆಗಳಲ್ಲಿ ಯುವ ಮತದಾರರ ಸೆಳೆಯುವ ನಿಟ್ಟಿನಲ್ಲಿ ನಾನಾ ರೀತಿ ವಿಭಿನ್ನ ಪ್ರಯತ್ನ ನಡೆಸಿದೆ. ಮತಗಟ್ಟೆಗಳ ಗೋಡೆಗಳಿಗೆ ನಿಮ್ಮ ಮತವೇ ನಿಮ್ಮ ಭವಿಷ್ಯ ಎಂಬ ಚಿತ್ರ ಸಹಿತ ಘೋಷವಾಕ್ಯವೂ ಸೇರಿ ನಾನಾ ರೀತಿಯ ಚಿತ್ರಬರಹಗಳನ್ನು ಮತಗಟ್ಟೆಗಳಲ್ಲಿ ಕಾಣಬಹುದಾಗಿದೆ.
ಮಾದರಿ ಮತಗಟ್ಟೆ: ಹುಣಸೂರಿನ ಕಟ್ಟೆಮಳಲವಾಡಿ ಸ.ಪ್ರೌ.ಶಾಲೆಯಲ್ಲಿ ಜಾಗೃತ ಮತದಾರನ ಮಾದರಿ, ಪಿರಿಯಾಪಟ್ಟಣ ಪಂಚವಳ್ಳಿ ಸ.ಹಿ.ಪ್ರಾ. ಶಾಲೆಯಲ್ಲಿ ಪರಿಸರ ಸ್ನೇಹಿ ಮತ್ತು ಜಾನಪದ ಕಲೆಗಳ ಮಾದರಿ, ನಂಜನಗೂಡಿನ ಹುಳಿಮಾವು ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ಜಾನಪದ ಕಲೆಗಳ ಮಾದರಿ, ಕೆ.ಆರ್.ನಗರದ ಅರಕೆರೆ ಕೊಪ್ಪಲಿನ ಸ.ಹಿ.ಪ್ರಾ.ಶಾಲೆಯಲ್ಲಿ ಪರಿಸರ ಸ್ನೇಹಿ ಮಾದರಿ, ಟಿ.ನರಸೀಪುರದ ಕಲಿಯೂರು ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ಗ್ರಾಮೀಣ ಕಲೆಯನ್ನು ಬಿಂಬಿಸುವ ಮಾದರಿ, ಹೆಚ್.ಡಿ.ಕೋಟೆಯ ಬಳ್ಳೆ ಹಾಡಿಯ ಕಾಕನಕೋಟೆ ಅರಣ್ಯ ಕಚೇರಿಯಲ್ಲಿ ಅರಣ್ಯ ಸಂಪತ್ತಿನ ಅರಿವು ಮೂಡಿಸುವ ಮಾದರಿ ಹಾಗೂ ಮೈಸೂರು ತಾಲ್ಲೂಕಿನ ಧನಗಳ್ಳಿ ಗ್ರಾಪಂನ ಯಡಹಳ್ಳಿ ಮತಗಟ್ಟೆಯಲ್ಲಿ ಮೈಸೂರು ಮಲ್ಲಿಗೆ, ವಿಳ್ಳೆದೆಲೆ ಸ್ಮರಿಸುವ ಮಾದರಿ ಮತಗಟ್ಟೆಗಳು ಜನಾಕರ್ಷಿಸಲಿವೆ.
ಹುಣಸೂರಿನ ಗುರುಪುರ ಗ್ರಾಪಂನ ನಾಗಪುರ ಆಶ್ರಮ ಶಾಲೆ, ನೇರಳಕುಪ್ಪೆ ಗ್ರಾಪಂ ಶೆಟ್ಟಿಹಳ್ಳಿ ಗ್ರಾಮದ ಶಾಲೆ ಹಾಗೂ ಉಮ್ಮತ್ತೂರು ಗ್ರಾಪಂನ ನಲ್ಲೂರು ಪಾಲದ ಶಾಲೆ ಮದುವೆ ಮಂಟಪ ಮಾದರಿ ಮತಗಟ್ಟೆ ಮೂಲಕ ಮತದಾನದ ಹಬ್ಬಕ್ಕೆ ಪ್ರಯತ್ನ ನಡೆದಿದೆ. ಪಿರಿಯಾಪಟ್ಟಣದ ಕೊಪ್ಪ ಗ್ರಾಪಂನ ರಾಣಿಗೇಟ್ ನ ಸರಕಾರಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಬುಡಕಟ್ಟು ಸಂಸ್ಕೃತಿ ಬಿಂಬಿಸುವ ಮಾದರಿ ಮತಗಟ್ಟೆ, ನಂಜನಗೂಡಿನ ತಾಂಡವಪುರ ಗ್ರಾಪಂನ ಸ.ಹಿ.ಪ್ರಾ.ಶಾಲೆಯಲ್ಲಿ ಸಾಂಸ್ಕೃತಿಕ ಉಡುಗೆ ತೊಟ್ಟು ಮತದಾರರನ್ನು ಸ್ವಾಗತಿಸಲು ಸಿದ್ದತೆ ನಡೆದಿದೆ. ಕೆಆರ್ ನಗರದ ಸಾತಿ ಗ್ರಾಮದ ಎಲ್ ಪಿಎಸ್ ಶಾಲೆಯ ಮತಗಟ್ಟೆ ಜನಪದದ ಸಂದೇಶ ಸಾರಲಿದ್ದು, ಹೆಚ್.ಡಿ.ಕೋಟೆ ಬಸವನಗಿರಿ ಎ ಹಾಡಿಯ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆ, ಬೀಮನಹಳ್ಳಿ ಸರಕಾರಿ ಗಿರಿಜನ ಆಶ್ರಮ ಶಾಲೆ, ಪಂಜಹಳ್ಳಿ ಕಾಲೋನಿಯ ಗಿರಿಜನ ಆಶ್ರಮ ಶಾಲೆಯಲ್ಲಿ ಗ್ರಾಮೀಣ ಸೊಗಡು ಹಾಗೂ ಬುಡಕಟ್ಟು ಸಂಸ್ಕೃತಿಯನ್ನು ಪರಿಚಯಿಸುವ ಕೆಲಸ ಆಗಲಿದೆ.
ಮಹಿಳೆಯರನ್ನು ಮತದಾನದ ಕಡೆಗೆ ಸೆಳೆಯುವ ಉದ್ದೇಶದೊಂದಿಗೆ ಹಾಗೂ ಮಹಿಳೆಯರು ನಿಸ್ಸಂಕೋಚವಾಗಿ ಮತಗಟ್ಟೆ ಕೇಂದ್ರಗಳಿಗೆ ತೆರಳಿ ಮತ ಚಲಾಯಿಸಲು ಅನುಕೂಲವಾಗುವಂತೆ 38 ಭಾಗದಲ್ಲಿ ಸಖಿ ಮತಗಟ್ಟೆಗಳನ್ನು ಸಿದ್ಧಗೊಳಿಸಲಾಗಿದೆ.
ಹುಣಸೂರು ತಾಲ್ಲೂಕಿನಲ್ಲಿ 5, ಪಿರಿಯಾಪಟ್ಟಣ 5, ಕೆ.ಆರ್.ನಗರ 5, ಮೈಸೂರು ತಾಲ್ಲೂಕು 5, ಟಿ.ನರಸೀಪುರ 5, ಹೆಚ್.ಡಿ.ಕೋಟೆ 3, ಸರಗೂರು 2, ನಂಜನಗೂಡು 5 ಮತ್ತು ವರುಣಾ ಕ್ಷೇತ್ರದಲ್ಲಿ 3 ಸಖಿ ಮತಗಟ್ಟೆಗಳು ಜನಾಕರ್ಷಸಲಿವೆ.
ಸಖಿ ಮತಗಟ್ಟೆಗಳಲ್ಲಿ ಗುಲಾಬಿ ಬಣ್ಣದಲ್ಲಿ ಪ್ರಕೃತಿಯೊಂದಿಗೆ ಮಹಿಳೆಯ ಚಿತ್ರ ಬಿಡಿಸುವ ಮೂಲಕ ಮತದಾನ ಕುರಿತು ಜಾಗೃತಿ ಮೂಡಿಸಲಾಗುವುದು. ಮಾತ್ರವಲ್ಲದೆ, ಮತದಾನ ದಿನದಂದು ಸಖಿ ಮತಗಟ್ಟೆಯಲ್ಲಿ ಮಹಿಳಾ ಚುನಾವಣಾಧಿಕಾರಗಳನ್ನೇ ಕಾರ್ಯನಿರ್ವಹಿಸುವುದು ಸಖಿ ಮತಗಟ್ಟೆ ವಿಶೇಷ. ಆ ಮೂಲಕ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿದೆ.