ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ಫ್ಯಾಷನ್ ಶೋ ತರ ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಗೇಲಿ ಮಾಡಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಳ್ಳಿಹಕ್ಕಿ
ಮೋದಿಯವರ ರೋಡ್ ಶೋದಿಂದ ಬಿಜೆಪಿಗೆ ಯಾವುದೇ ಲಾಭವಾಗಿಲ್ಲ ಎಂದು ಕುಟುಕಿದರು.
ಪ್ರಧಾನಿ ರೋಡ್ ಶೋದಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಆಗಿದೆ, ಅವರು ರಾಜ್ಯದ ಅಭಿವೃದ್ಧಿ ಬಗ್ಗೆ ಯಾವುದೇ ಮಾತನಾಡಿಲ್ಲ, ರೋಡ್ ಶೋ ಮೂಲಕ ಕೇವಲ ಜನರ ಗಮನ ಸೆಳೆಯುವಲ್ಲಿ ಮುಂದಾದರು ಆದರೆ ಏನೂ ಪ್ರಯೋಜನವಾಗಿಲ್ಲ ಎಂದರು.
ಬಿಜೆಪಿ ಯಾವ ಮುಖವನ್ನು ಇಟ್ಟುಕೊಂಡು ರಾಜ್ಯದಲ್ಲಿ ಮತಯಾಚನೆ ಮಾಡುತ್ತದೆ ಎಂದು ಪ್ರಶ್ನಿಸಿದ ವಿಶ್ವನಾಥ್, ಭ್ರಷ್ಟರ ಕೋಪವಾಗಿದೆ ರಾಜ್ಯ ಬಿಜೆಪಿ ಎಂದು ದೂರಿದರು.
ಹಾಗಾಗಿ ಪ್ರಧಾನಿಯನ್ನು ರಾಜ್ಯಕ್ಕೆ ಕರೆಸಿ ಮತಯಾಚನೆ ಮಾಡುತ್ತಿದ್ದಾರೆಂದು ಗೇಲಿ ಮಾಡಿದರು.
ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರನ್ನು ಸೋಲಿಸಲು ಬಿಜೆಪಿ ರಣತಂತ್ರ ರೂಪಿಸಿದೆ. ಆದರೆ ಇದು ನಡೆಯುವುದಿಲ್ಲ.
ಅವರಿಬ್ಬರೂ ಹೆಚ್ಚಿನ ಮತಗಳ ಅಂತರದಲ್ಲಿ ಜಯಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ವಿಶ್ವನಾಥ್ ಭವಿಷ್ಯ ನುಡಿದರು.
ಪ್ರಧಾನಿಯಾದವರು ಒಬ್ಬ ಜಿಲ್ಲಾ ಪಂಚಾಯತ್ ಸದಸ್ಯನಂತೆ ಮಾತನಾಡಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಭಾರತದಿಂದ ಕರ್ನಾಟಕವನ್ನು ಬೇರ್ಪಡಿಸಲು ಕಾಂಗ್ರೆಸ್ ಮುಂದಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಕಾಂಗ್ರೆಸಿನ ಯಾವ ನಾಯಕರು ಮಾತನಾಡಿಲ್ಲ. ಮೋದಿ ಹೀಗೆ ಹೇಳಿರುವುದು ಸರಿಯಲ್ಲ ಎಂದು ವಿಶ್ವನಾಥ್ ಹೇಳಿದರು.