ಮದುವೆ ಆಮಂತ್ರಣ ಮಾದರಿ ಪತ್ರಿಕೆ ಮೂಲಕ ಮತದಾನಕ್ಕೆ ಆಹ್ವಾನ

ಮೈಸೂರು: ಮೈಸೂರಿನ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಹಾಗೂ ಅಪೂರ್ವ ಸ್ನೇಹ ಬಳಗದವರು ಮತದಾರರನ್ನು ವಿಶೇಷವಾಗಿ ‌ ಆಹ್ವಾನಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ನಂಜುಮಳಿಗೆ ಸುತ್ತಮುತ್ತ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರಿಗೆ  ಮಂಗಳವಾರ ಮತದಾನಕ್ಕೆ ಮದುವೆ ಮಾದರಿ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿ ವಿತರಿಸಿ ಆಹ್ವಾನಿಸಿದರು.

ಸಾರ್ವಜನಿಕರಿಗೆ ಹಾಗೂ ಮನೆಮನೆಗೆ ತೆರಳಿ ಆಮಂತ್ರಣ ಪತ್ರಿಕೆ ತಲುಪಿಸುವ ಮೂಲಕ ಮತದಾನಕ್ಕೆ ಆಮಂತ್ರಿಸಿ ಮತದಾರರ ಗಮನಸೆಳೆಯುವ ಪ್ರಯತ್ನ ಮಾಡಲಾಯಿತು.

ಶ್ರೀಶೋಭಕೃತ್ ನಾಮಸಂವತ್ಸರ ದಿನಾಂಕ 10.5.2023 ರ ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಲ್ಲುವ ಶುಭ ಗಳಿಗೆಯಲ್ಲಿ ಮತದಾನ ಚುನಾವಣೋತ್ಸವ ನೆರವೇರುವಂತೆ ಭಾರತ ಸರ್ಕಾರ ನಿಶ್ಚಯಿಸಿರುವುದರಿಂದ

ತಾವು ಸಕುಟುಂಬ ಸಮೇತರಾಗಿ ಆಗಮಿಸಿ  ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಭಾರತದ ಭವಿಷ್ಯವನ್ನು ರೂಪಿಸಬೇಕೆಂದು ಕೋರುವ ತಮ್ಮ ಆಗಮನಾಭಿಲಾಷಿಗಳು ಭಾರತ ಚುನಾವಣೆ ಆಯೋಗ ಸ್ಥಳ, ಮತಗಟ್ಟೆ ಕೇಂದ್ರ ಎಂದು ಆಹ್ವಾನ ಪತ್ರಿಕೆ ಮುದ್ರಿಸಲಾಗಿದೆ.

ವಿಶೇಷ ಸೂಚನೆಯಾಗಿ ದಯವಿಟ್ಟು ಉಡುಗೊರೆ ಕೊಡಬೇಡಿ ಮತ್ತು ಪಡೆಯಬೇಡಿ ಬಲಿಷ್ಠ ಭಾರತ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿ, ಹಣ ಕೇಳದೆ ಮತನೀಡಿ ಆಶೀರ್ವದಿಸಿ ಎಂದು ಮುದ್ರಿಸಲಾಗಿದೆ.

ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ವಿಶೇಷವಾಗಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಕೆ ಎಂ ಪಿ ಕೆ ಚರಿಟಬಲ್ ಟ್ರಸ್ಟ್ ನವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕೆ ಎಂ ಪಿ ಕೆ ಚರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಎಸ್. ಎನ್ ರಾಜೇಶ್,ಆನಂದ್, ಆದರ್ಶ್, ಗಿರೀಶ್, ಸುಚೇಂದ್ರ, ಚಕ್ರಪಾಣಿ ಮತ್ತಿತರರು ಮತದಾನದ ಆಹ್ವಾನ ಪತ್ರಿಕೆ ವಿತರಿಸಿದರು.

ನಂಜುಮಳಿಗೆಯಲ್ಲಿ ಹೂ ಮಾರುವವರು,ಬಾಳೆಹಣ್ಣು ವ್ಯಾಪಾರಿ ತರಕಾರಿ ಮಾರುವವರು,ಸೊಪ್ಪು ಮಾರಾಟ ಮಾಡುವ ಮಹಿಳೆಯರು ಹೀಗೆ ಎಲ್ಲಾ ವ್ಯಾಪಾರಿಗಳಿಗೆ ಮತದಾನದ ಆಹ್ವಾನ ಪತ್ರಿಕೆಯನ್ನು ಸಂಘಟನೆಯವರು ನೀಡಿ ತಪ್ಪದೆ ಮತದಾನದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.