ಮೈಸೂರಿನಲ್ಲಿ‌ ಅತ್ಯುತ್ಸಾಹದಿಂದ ಮತ ಚಲಾಯಿಸಿದ ಮತದಾರ

ಮೈಸೂರು: ಪ್ರಜಾಪ್ರಭುತ್ವದ ಹಬ್ಬವಾದ ಬುಧವಾರ ಮೈಸೂರಲ್ಲಿ ಮತದಾರರು ಅತ್ಯುತ್ಸಾಹದಿಂದ ಮತ ಚಲಾಯಿಸಲು ಆಗಮಿಸಿದ್ದರು.

ಬೆಳಿಗ್ಗೆಯಿಂದಲೇ ಮತಗಟ್ಟೆ ಬಳಿ ಮತದಾರರು ಸಾಲುಗಟ್ಟಿ ನಿಂತಿರುವ ದೃಶ್ಯ ಸರ್ವೇಸಾಮಾನ್ಯವಾಗಿತ್ತು.

ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಎಲ್ಲಾ ಮತಗಟ್ಟೆಗಳಲ್ಲಿಯೂ ಬೆಳಿಗ್ಗೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಮತವನ್ನು ಅತ್ಯುತ್ಸಾಹದಿಂದ ಚಲಾಯಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಮಧ್ಯಾಹ್ನವಾದರೂ ಮತಗಟ್ಟೆ ಬಳಿ ಬಾರದ ಮತದಾರ ಈ ಬಾರಿ ಮಳೆ ಕಾರಣಕ್ಕೊ ಏನೋ ಬೆಳಗಿನಿಂದಲೇ ಸಾಲುಗಟ್ಟಿ ನಿಂತಿರುವುದು ಎಲ್ಲೆಡೆ ಕಂಡು ಬರುತ್ತಿದೆ.

ಮೈಸೂರಿನ ಬಹುತೇಕ ಮತಗಟ್ಟೆಗಳಲ್ಲಿ ಮಹಿಳೆಯರು, ವಿಕಲಚೇತನರು, ವಯೋ ವೃದ್ಧರು ತಮ್ಮ ಮತ ಚಲಾಯಿಸಲು ಗಂಟೆಗಟ್ಟಲೆ ಸಾಲುಗಟ್ಟಿ ನಿಂತಿರುವುದು ಕಂಡು ಬಂದಿದೆ.

ಇದೇ ಮೊದಲ ಬಾರಿಗೆ ಮತದಾನ ಮಾಡುವ ಯುವಕ-ಯುವತಿಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಸಾಹದಿಂದ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಇನ್ನು ಕೆ. ಆರ್. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ವತ್ಸರವರು ಸಂಸ್ಕೃತ ಪಾಠ ಶಾಲೆಯಲ್ಲಿ ಬೆಳಿಗ್ಗೆ ತಮ್ಮ ಮತ ಚಲಾಯಿಸಿದರು.

ಹಾಗೆಯೇ ಕಾಂಗ್ರೆಸ್ ಅಭ್ಯರ್ಥಿ ಎಂ. ಕೆ. ಸೋಮಶೇಖರ್ ಮರಿಮಲ್ಲಪ್ಪ ಶಾಲೆಯಲ್ಲಿ, ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಅವರು ಜ್ಞಾನ ಗಂಗಾ ಶಾಲೆಯಲ್ಲಿ ತಮ್ಮ ಮತ ಚಲಾಯಿಸಿದರು.

ಚಾಮರಾಜ ಕ್ಷೇತ್ರದ ಅಭ್ಯರ್ಥಿ ಹರೀಶ್ ಗೌಡ ಸಹ ಬೆಳಿಗ್ಗೇನೆ ತಮ್ಮ ಕುಟುಂಬದವ ರೊಂದಿಗೆ ಆಗಮಿಸಿ ಅರಸು ಬೋರ್ಡಿಂಗ್ ಶಾಲೆಯಲ್ಲಿ ಮತಚಲಾಯಿಸಿದ್ದಾರೆ.

ಹಾಗೆಯೇ ಪ್ರತಿಷ್ಠಿತ ರಣಕಣವಾಗಿರುವ ವರುಣಾ ಕ್ಷೇತ್ರದ ಅಭ್ಯರ್ಥಿ ಸಿದ್ದರಾಮಯ್ಯನವರು ಸಿದ್ದರಾಮಯ್ಯನ ಹುಂಡಿಯಲ್ಲಿ ಮತ ಚಲಾಯಿಸಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ. ಟಿ. ದೇವೇಗೌಡ ಅವರು ತಮ್ಮ ಮತವನ್ನು ಗುಂಗ್ರಾಲ್ ಛತ್ರದಲ್ಲಿ ಮತದಾನ ಮಾಡಿದ್ದಾರೆ.

ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಈವರೆಗೂ ಮೈಸೂರಿನ ಕೆ. ಆರ್. ಕ್ಷೇತ್ರದಲ್ಲಿ ಮತ ಚಲಾಯಿಸುತ್ತಿದ್ದರು. ಆದರೆ ಈ ಬಾರಿ ಶ್ರೀಗಳು ತಮ್ಮ ಹೆಸರನ್ನು ಸುತ್ತೂರಿನಲ್ಲಿ ನೋಂದಾಯಿಸಿದ್ದು ಸುತ್ತೂರಿನಲ್ಲಿ ಮತದಾನ ಮಾಡಿದ್ದಾರೆ.

ಮೈಸೂರಿನ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಗೆ 80 ವರ್ಷ ವಾಗಿರುವುದರಿಂದ ಅವರು ತಮ್ಮ ಮತವನ್ನು ಆಶ್ರಮದಲ್ಲಿಯೇ ಈಗಾಗಲೇ ದಾಖಲಿಸಿದ್ದಾರೆ.

ಬೆಳಿಗ್ಗೆ ಆಶ್ರಮದ ಕಿರಿಯ ಸ್ವಾಮೀಜಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ಜೆಎಸ್ಎಸ್ ಕಾಲೇಜಿನ ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾಯಿಸಿದ್ದಾರೆ.

ಒಟ್ಟಾರೆ ಮೈಸೂರು ‌ಜಿಲ್ಲೆಯಲ್ಲಿ ಮತದಾನ ಪ್ರಕ್ರಿಯೆ‌ ಶಾಂತಿಯುತವಾಗಿ‌ ಹಾಗೂ ಉತ್ಸಾಹದಿಂದ ಸಾಗಿದೆ.