ಕೇರಳದಲ್ಲಿ 25 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ವಶ

ತಿರುವನಂತಪುರಂ: ಮಾದಕವಸ್ತು ನಿಗ್ರಹ ದಳ (NCB) ಹಾಗೂ ಭಾರತೀಯ ನೌಕಾಪಡೆ   ಕೇರಳದ ಕೊಚ್ಚಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ 25 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿವೆ.

ಈ ಪ್ರಕರಣ ಸಂಬಂಧ ಒಬ್ಬ ಶಂಕಿತ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಲಾಗಿದೆ.

ಕೊಚ್ಚಿಯ ಬಂದರಿಗೆ ಬಂದ ನೌಕೆಯಲ್ಲಿ 134 ಚೀಲಗಳಲ್ಲಿ ಮಾದಕ ವಸ್ತು ತರಲಾಗಿತ್ತು.

ಅದರ ಮೌಲ್ಯ 25,000 ಕೋಟಿ ರೂ. ಎಂದು ಎನ್‌ಸಿಬಿ ಸ್ಪಷ್ಟಪಡಿಸಿದೆ.

ಒಟ್ಟು 2,525 ಕೆಜಿ ತೂಕದ ಡ್ರಗ್ಸ್  ವಶಪಡಿಸಿಕೊಳ್ಳಲಾಗಿದ್ದು ಇದು ದೇಶದಲ್ಲಿಯೇ ಅತಿ ದೊಡ್ಡ ಮಾದಕ ವಸ್ತು ಕಳ್ಳ ಸಾಗಣೆ ಪ್ರಕರಣವಾಗಿದೆ.

ಮೊದಲು ಇದರ ಬೆಲೆಯನ್ನು 12,000 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಆದರೆ ಡ್ರಗ್ಸ್ ಗುಣಮಟ್ಟ ಪರಿಶೀಲನೆ ಬಳಿಕ ಇದರ ಬೆಲೆ 25,000 ಕೋಟಿ ರೂ.ಆಗಲಿದೆ ಎಂದು ಅಂದಾಜಿಸಲಾಗಿದೆ.

ಉತ್ಕೃಷ್ಟ ಗುಣಮಟ್ಟದ ಡ್ರಗ್ಸ್ ಅನ್ನು ಭಾರತ, ಶ್ರೀಲಂಕಾ ಹಾಗೂ ಮಾಲ್ಡೀವ್ಸ್‌ಗೆ ಸಾಗಿಸಲೆಂದು ಹಡಗಿನಲ್ಲಿ ತರಲಾಗಿತ್ತು ಎಂದು ಮೂಲಗಳು ತಿಳಿಸಿವೆ

ಅಫ್ಘಾನಿಸ್ತಾನದಲ್ಲಿ ಉತ್ಪಾದಿಸಲಾಗಿದ್ದ ಡ್ರಗ್ಸ್ ಅನ್ನು ಪಾಕಿಸ್ತಾನ-ಇರಾನ್ ಸಮೀಪದ ಮಕ್ರಾಮ್ ಕರಾವಳಿಯಿಂದ ಮದರ್ ಶಿಪ್ ಎಂಬ ಹಡಗಿನಲ್ಲಿ ತರಲಾಗಿತ್ತು ಎಂಬುದು ತನಿಖೆ ವೇಳೆ ಗೊತ್ತಾಗಿದೆ.